ಶಿರಸಿ : ಜನಸಂಖ್ಯೆ ಹೆಚ್ಚಳದಿಂದ ಉಂಟಾಗುತ್ತಿರುವ ನಗರೀಕರಣ ಮತ್ತು ಔದ್ಯೋಗಿಕರಣದಿಂದ ನಿಸರ್ಗಕ್ಕೆ ಹಾನಿ ಉಂಟಾಗುತ್ತಿದ್ದು, ಗಿಡಗಳನ್ನು ನೆಟ್ಟು ಪೋಷಿಸುವುದು ಸಹ ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಹೇಳಿದರು.
ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಭವನದಲ್ಲಿ ರಾಷ್ಟ್ರೀಯ ಕಾನೂನು ಅರಿವು ಮತ್ತು ನೆರವು ಪೂರೈಕೆಗಳ ದಶ ದಿನದ ಕಾರ್ಯಕ್ರಮದ ಅಂಗವಾಗಿ ನಡೆದ ‘ಅರಣ್ಯ ರಕ್ಷಣೆಯಲ್ಲಿ ಗ್ರಾಮ ಅರಣ್ಯ ಸಮಿತಿಗಳ ಪಾತ್ರ’ ಕುರಿತ ಕಾನೂನು ಕಾರ್ಯಾಗಾರದಲ್ಲಿ ವಿಶೇಷ ಆಮಂತ್ರಿತರಾಗಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ನ್ಯಾಯಾದೀಶ ಶಾಂತವೀರ ಶಿವಪ್ಪ ಅರಣ್ಯ ಕಾನೂನುಗಳನ್ನು ಪಾಲಿಸುವ ಮೂಲಕ ಅರಣ್ಯವನ್ನು ಸಂರಕ್ಷಿಸಿ ಪೋಷಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಸರಗೋಡ ವಹಿಸಿದ್ದರು. ನ್ಯಾಯಾಧೀಶ ನರೇಂದ್ರ ಬಿ.ಆರ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಡಿ. ಸುದರ್ಶನ, ಎಸ್.ಎಸ್. ಇನಾಂದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.