ಯಲ್ಲಾಪುರ: ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಶುಕ್ರವಾರ ತಾಲೂಕಿನ ಮಾಗೋಡ ಚಂದಗುಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 7-40 ಗಂಟೆಗೆ ತಮ್ಮ ಕೆಲವೇ ಕೆಲವು ಆಪ್ತರೊಂದಿಗೆ ಚಂದಗುಳಿ ಗಂಟೆ ಗಣಪತಿ ದೇವಸ್ಥಾನ ಎಂದೇ ಪ್ರಸಿದ್ಧಿ ಹೊಂದಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತಲುಪಿದ ದೇವೇಗೌಡ ಅವರು, ಸಿದ್ಧಿವಿನಾಯಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬದ ಒಳಿತಿಗೆ ದೊಡ್ಡ ಗಂಟೆಯೊಂದನ್ನು ನೀಡುವುದರ ಮೂಲಕ ಹರಕೆಯನ್ನು ತೀರಿಸಿದರು.
ತಮ್ಮ ಪುತ್ರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಮೇ 5ರವರೆಗೆ ದೇವಸ್ಥಾನದ ಸಿದ್ಧಿವಿನಾಯಕನಿಗೆ ನಿತ್ಯ ಪೂಜೆ ಸಲ್ಲಿಸುವಂತೆ ಅರ್ಚಕರಲ್ಲಿ ಕೇಳಿಕೊಂಡು ಪೂಜೆಗೆ ತಗಲುವ ವೆಚ್ಚವನ್ನು ದೇವಸ್ಥಾನದ ಟ್ರಸ್ಟಿ ಹಾಗೂ ಅರ್ಚಕರಿಗೆ ಹಸ್ತಾಂತರಿಸಿದರು.
ನಂತರ ದೇವಸ್ಥಾನದ ಟ್ರಸ್ಟಿಗಳು ಹಾಗೂ ನಂದೊಳ್ಳಿ ಗ್ರಾಮ ಪಂಚಾಯಿತಿ ಪ್ರಮುಖರೊಂದಿಗೆ ಸಭೆ ನಡೆಸಿದ ಮಾಜಿ ಪ್ರಧಾನಿ, ನಿರ್ಮಾಣವಾಗುತ್ತಿರುವ ದೇವಸ್ಥಾನದ ನೂತನ ಕಟ್ಟಡದ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಶಕ್ತಿ ಗಣಪತಿ ದೇವಸ್ಥಾನವೆಂದೇ ಪ್ರಖ್ಯಾತಿ ಪಡೆದಿರುವ ಈ ದೇವಸ್ಥಾನದ ಮಹಿಮೆಯನ್ನು ಆಲಿಸಿದ ಅವರು ತಾವು ಈ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಗೆ ಕಾರಣರಾದವರ ಕುರಿತು ಟ್ರಸ್ಟಿಗಳಿಗೆ ತಿಳಿಸಿದರು.
ಚಂದುಗುಳಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡುವುದು ಸೇರಿದಂತೆ ಮಧ್ಯಾಹ್ನ ಉಮ್ಮಚಗಿಯ ಜ್ಯೋತಿಷಿ ಎಂ ಟಿ ಹೆಗಡೆ ಬೆಳಗುಂಡಿ ಅವರ ಮನೆಗೆ ಭೇಟಿ ನೀಡುವುದಕ್ಕಾಗಿ ಯಲ್ಲಾಪುರಕ್ಕೆ ಗುರುವಾರ ಸಂಜೆ ಆಗಮಿಸಿದ ದೇವೇಗೌಡ ಅವರು ಪಟ್ಟಣದ ಅರಣ್ಯ ಇಲಾಖೆ ಪರಿವೀಕ್ಷಣಾ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದರು.
ಈ ಸಂದರ್ಭದಲ್ಲಿ ಯಲ್ಲಾಪುರ ತಹಶೀಲ್ದಾರ್ ಡಿ ಜಿ ಹೆಗಡೆ, ಪೊಲೀಸ್ ನಿರೀಕ್ಷಕ ಡಾ ಮಂಜುನಾಥ್ ನಾಯಕ, ಪಿಎಸ್ಐ ಲಕ್ಕಪ್ಪ ನಾಯ್ಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ ಆರ್ ನಾಯ್ಕ, ಯಲ್ಲಾಪುರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಉಸ್ತುವಾರಿ ರವೀಂದ್ರನಾಥ ನಾಯ್ಕ, ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ರವಿಚಂದ್ರ ನಾಯ್ಕ, ಚಂದಗುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪು ಆಚಾರಿ ನಂದೊಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ ಎನ್ ಭಟ್, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್ ಎಸ್ ಭಟ್, ಎಪಿಎಂಸಿ ಮಾಜಿ ಅಧ್ಯಕ್ಷ ಎಲ್ ಪಿ ಭಟ್ಟ ಗುಂಡ್ಕಲ್, ಮುಂಡಗೋಡ ಜೆಡಿಎಸ್ ಪ್ರಮುಖ ಅರುಣ ಗೋಂದಳಿ, ಯಲ್ಲಾಪುರ ಜೆಡಿಎಸ್ ಪ್ರಮುಖ ಎಂ ವಿ ಭಟ್ ದೇವಸ್, ಮುಂಡಗೋಡ ಜೆಡಿಎಸ್ ಪ್ರಮುಖರಾದ ಎ ಎಸ್ ಸಂಗೂರುಮಠ, ಪ್ರಕಾಶ ಬಂಕಾಪುರ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.
ದೇವಸ್ಥಾನದ ಅರ್ಚಕರಾದ ಗಣಪತಿ ಭಟ್ ಹಾಗೂ ಗಣೇಶ್ ಭಟ್ ಮತ್ತಿತರರು ಮಾಜಿ ಪ್ರಧಾನಿ ಹಾಗೂ ಆವರ ಕುಟುಂಬದ ಹೆಸರಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು.
ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯ ವೈದ್ಯ ಡಾ ಎಮ್ ಎಚ್ ಕುರ್ತಕೊಟಿ ಹಾಗೂ ಅವರ ಸಿಬ್ಬಂದಿಗಳು ಯಲ್ಲಾಪುರ ಪ್ರವಾಸದಲ್ಲಿರುವ ದೇವೇಗೌಡರು ಆರೋಗ್ಯ ತಪಾಸಣೆಯನ್ನು ನಡೆಸಿದರು.