18644504 1785311991783267 1470067674 n

                      ಶುಭಾ ಗಿರಣಿಮನೆ
ಸರಕಾರಿ ಶಾಲೆಗಳು ಎಂದ ತಕ್ಷಣ ಸಾಮಾನ್ಯ ಜನರು ಮುಖವನ್ನು ಕಿವುಚುವಂತೆ ಆಗಿದೆ. ಸರಕಾರಿ ಶಾಲೆಗೂ ಖಾಸಗಿ ಶಾಲೆಗಳಿಗೂ ಭಾರಿ ಪೈಪೋಟಿಯೇ ಇದೆ. ಈ ಪೈಪೋಟಿಯಲ್ಲಿ ಸರಕಾರಿ ಶಾಲೆಗಳು ಸೋಲುತ್ತಿದೆ ಎನ್ನುವುದು ಸತ್ಯವಾದರೂ ಸರಕಾರ ಒಪ್ಪಿಕೊಳ್ಳುವುದಿಲ್ಲ. ಖಾಸಗಿ ಶಲೆಗಳು ಡೊನೆಶನ್ ತೆಗೆದುಕೊಳ್ಳುತ್ತವೆ. ವಿವಿಧ ಕಡೆಯಿಂದ ಹಣ ಸಂಗ್ರಹಿಸುತ್ತದೆ ಅದರಿಂದ ಬೇಕು ಬೇಕಾದ ಸವಲತ್ತು ಸೌಲಭ್ಯವನ್ನು ಮಾಡುತ್ತದೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ವಿಶೇಷವಾದ ಚಟುವಟಿಕೆಗಳಿಗೆ ಮಗುವನ್ನು ಒಡ್ಡಿ ಮುಂದಿನ ಭವಿಷ್ಯ ರೂಪಿಸುವಲ್ಲಿ ಖಾಸಗಿ ಶಿಕ್ಷಣ ಸಹಕಾರಿಯಾಗಿದೆ ಎನ್ನುವುದು ಪಾಲಕ ವರ್ಗದ ಮಾತು.
ಹಾಗಾದರೆ ಸರಕಾರಿ ಶಾಲೆಗಳು ಅಷ್ಟು ಕಳಪೆಯಾಗಿವೆಯೇ ಎಂದು ಯೋಚನೆ ಹುಟ್ಟುತ್ತದೆ. ಶಾಲೆಗಳಿಗಾಗಿ ವಿವಿಧ ಯೋಜನೆಗಳು ಬರಪೂರವಾಗಿಯೇ ಬರುತ್ತಿದೆ. ಬಿಸಿಯೂಟ, ಹಾಲು, ಸಾಂಸ್ಕøತಿಕವಾದ ಚಟುವಟಿಕೆಯಾದ ಪ್ರತಿಭಾ ಕಾರಂಜಿ, ಉಚಿತ ಪಠ್ಯ ಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ ಹೀಗೆ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವಾಗುವ ಯೋಜನೆಗಳನ್ನು ತಂದಿದೆ. ಆದರೆ ಇದು ಯಾವುದೂ ಕೂಡ ಜನರಲ್ಲಿ ವಿಶ್ವಾಸವನ್ನು ಮೂಡಿಸಿಲ್ಲವೆ?
ಸರಕಾರಿ ಶಾಲೆಯಲ್ಲಿ ಯೋಜನೆಗಳಿವೆಯೇ ಹೊರತು ಯೋಚನೆಗಳಿಲ್ಲ. ಸರಿಯಾದ ಶಿಸ್ತಿನ ಕ್ರಮಗಳಿಲ್ಲ. ಬರಬೇಕಾದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ, ಚೆಂದವಾದ ಮೈದಾನದ ವ್ಯವಸ್ಥೆ ಇಲ್ಲ. ಎಲ್ಲದಕ್ಕಿಂತ ಉತ್ತಮ ಗುಣ ಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಂದ ನೀಡಲು ಸಾಧ್ಯವಾಗಿಲ್ಲ. ಇತರ ಚಟುವಟಿಕಗೆ ಹೆಚ್ಚಿನ ಒತ್ತು ನೀಡಲಾಗುವುದಿಲ್ಲ. ಕೇವಲ ಅದು ಸರಕಾರಿ ಶಾಲೆ ಆ ಶಾಲೆಗೆ ಒಂದಿಷ್ಟು ಕೊಟ್ಟರಾಯಿತು ಎಂದು ತಿಳಿದ ಸರಕಾರದಂತೆ ಕಾಣಿಸುತ್ತದೆ. ಇನ್ನು ಹಲವು ಶಿಕ್ಷಕರು (ಕೆಲವು ಉತ್ತಮ ಶಿಕ್ಷಕರು ಇದ್ದಾರೆ. ಸರಕಾರಿ ಶಾಲೆ ಎಂದರೆ ತನ್ನ ಮನೆ ಎನ್ನುವಂತೆ ದುಡಿಯುವವರಿದ್ದಾರೆ, ದೇವಸ್ಥಾನ ಎಂದು ಪೂಜಿಸುವವರಿದ್ದಾರೆ. ಇಂಥವರನ್ನು ಹೊರತು ಪಡಿಸಿ) ಸರಕಾರ ನಮಗೆ ಸಂಬಳ ನೀಡುತ್ತದೆ. ನಾವು ಮಕ್ಕಳಿಗೆ ಪಾಠ ಮಾಡಿದರು ಸೈ ಮಾಡದಿದ್ದರೂ ಸೈ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಹಾಗಿದ್ದಾಗ ಸರಕಾರಿ ಶಾಲೆಗಳು ಹೇಗೆ ಉಳಿದಾವು ಎನ್ನುವುದು ಒಂದು ಪ್ರಶ್ನೆಯೇ ಸರಿ.
ಒಂದು ಮಾದರಿ ಶಾಲೆಯಾಗಬೇಕು ಎನ್ನುವುದಾದರೆ ಮೊದಲು ಶಿಕ್ಷಣದ ಗುಣಮಟ್ಟ ಚೆನ್ನಾಗಿ ಇರಬೇಕು. ದಿನದ ಹೆಚ್ಚಿನ ಸಮಯ ಮಕ್ಕಳು ಶಾಲೆಯಲ್ಲಿ ಕಳೆಯುತ್ತವೆ. ಆ ಮಕ್ಕಳಿಗೆ ಬೇಕಾಗುವ ಮೂಲ ಸೌಲಭ್ಯ ಮೊದಲು ಬೇಕು. ಎಷ್ಟೋ ಶಾಲೆಗಳಲ್ಲಿ ಶೌಚಾಲಯ ಎನ್ನುವುದು ಮುರಿದು ಬಿದ್ದುಹೋಗಿವೆ, ಶಾಲೆ ಬಾಡಿಗೆಯ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಅಲ್ಲವೇ ಇಲ್ಲಿ ಬಿರುಕು ಬಿಟ್ಟ ಗೋಡೆಗಳು ಕಾಣುತ್ತವೆ, ಮೇಲ್ಚಾವಣಿಯೂ ಸೋರುತ್ತಿದೆ. ಒಟ್ಟಿನಲ್ಲಿ ಅಭದ್ರತೆಯು ಹಲವು ಸರಕಾರಿ ಶಾಲೆಯಲ್ಲಿ ಕಾಣುತ್ತೇವೆ.
ಈಗ ಸರಕಾರಿ ಶಾಲೆಗಳು ಹಲವು ಕಡೆ ಮುಚ್ಚಿ ಹೋಗುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗುತ್ತ ಹೋದಾಗ ಆ ಶಾಲೆಯನ್ನು ನಡೆಸುವುದು ದುಬಾರಿಯಾಯಿತು ಎಂದು ಸರಕಾರ ಒಂದು ಶಾಲೆಯಲ್ಲಿ ಹತ್ತು ಮಕ್ಕಳು ಇರಬೇಕು ಎಂದು ಹೇಳಿದೆ. ಈಗ ಹಳ್ಳಿಗಳಲ್ಲಿ ಹತ್ತು ಮಕ್ಕಳನ್ನು ಊರನಲ್ಲಿ ಹುಡುಕಿವುದು ಕಷ್ಟ ಎನ್ನುವಂತಾಗಿದೆ. ಒಂದು ಎರಡು ಮಕ್ಕಳಿರುವ ಮನೆಯಲ್ಲಿ ಅಬ್ಬಬ್ಬಾ ಎಂದರೆ ಐದನೇ ತರಗತಿಯ ವರೆಗೆ ಹತ್ತಿರದ ಶಾಲೆ ಊರಿನ ಶಾಲೆ ಎನ್ನುವ ಭಾವನಾತ್ಮಕ ಬಂಧಕ್ಕೆ ಕಟ್ಟು ಬಿದ್ದು ಕಳಿಸಿದರೂ ಮುಂದೆ ಉತ್ತಮ ಶಿಕ್ಷಣ ಸಿಗುವ ಖಾಸಗಿ ಶಾಲೆಯತ್ತ ಮುಖಮಾಡುತ್ತಾರೆ.
ಸರಕಾರ ಶಾಲೆಗಳನ್ನು ತೆರೆಯುವಾಗ ಮಕ್ಕಳ ಸಂಖ್ಯೆ ಮತ್ತು ಶಾಲೆಯ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಿತ್ತು. ಸರಕಾರ ಹತ್ತು ಶಾಲೆ ಒಂದು ಭಾಗದಲ್ಲಿ ತೆರೆದಿದೆ ಎಂದು ಹೇಳುವ ಬದಲು ಐದೇ ಶಾಲೆಯನ್ನು ತೆರೆದು ಖಾಸಗಿ ಶಾಲೆಗಳಂತೆ ಅಭಿವೃದ್ಧಿ ಪಡಿಸಿ ಸವಾಲು ಎಸೆಯಬಹುದಿತ್ತು. ಆದರೆ ಅದರ ಅವಷ್ಯಕತೆ ಸರಕಾರಕ್ಕಾಗಲಿ ಅಧಿಕಾರಿಗಳಿಗಾಗಲಿ ಬೇಕಾಗಿಲ್ಲ. ಲಂಚಗೋಳಿತನ ಇಲ್ಲಿಯೂ ಸಾಕಷ್ಟು ಮೆರೆಯುತ್ತಿದೆ. ಶಿಕ್ಷಕರ ಕೊರತೆಯನ್ನು ಸಹ ಸರಿಯಾಗಿ ತುಂಬಿಕೊಳ್ಳಲಾಗುತ್ತಿಲ್ಲ. ಇದ್ದ ಶಿಕ್ಷಕರಿಗೆ ಒತ್ತಡಗಳು ಹೆಚ್ಚು. ಕೇವಲ ಮಕ್ಕಳಿಗೆ ಕಲಿಸಿದರೆ ಸಾಲದು. ಅದರ ಜೊತೆ ಸರಕಾರದ ಇತರ ಕೆಲಸಗಳಿಗೂ ಓಡಬೇಕು. ಚುನಾವಣೆ ಬಂದರೆ, ಗಣತಿ ಕೆಲಸ ಹೀಗೆ ಅವರಿಗೆ ಬೇರೆ ಬೇರೆ ಕೆಲಸವನ್ನು ಸರಕಾರವೇ ವಹಿಸುತ್ತದೆ. ಈ ಹೊಸ ಜವಬ್ದಾರಿ ಹೊರಲು ತರಬೇತಿ ಎಂದು ಮತ್ತಷ್ಟು ದಿನಗಳ ಕಾಲ ಶಿಕ್ಷಕರನ್ನು ಶಾಲೆಯಿಂದ ದೂರವಿಡುತ್ತಿದೆ.
ಹೆಸರಿಗೆ ಮಾತ್ರ ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲಿ ಕೂಡ ಎಲ್ಲ ಸೌಲಭ್ಯ ಸಿಗುವಂತೆ ಮಾಡಿದ್ದೇವೆ. ಎಲ್ಲ ಮಕ್ಕಳನ್ನು ಒಂದೇ ಮನೋಭಾವದಿಂದ ನೋಡುತ್ತೇವೆ ಎಂದು ಹೇಳುತ್ತಿದ್ದರೂ ಒಂದನೇ ತರಗತಿಗೆ ಸೇರಿಸುವಾಗ ಜಾತಿ ಎಂದು ಕೇಳಿಯೇ ನೊಂದಾಯಿಸಬೇಕಿದೆ. ಮೇಲ್ಜಾತಿ ಕೆಳಜಾತಿ ಎಂದು ಜಾತಿಯನ್ನು ಮುಗ್ದ ಮಕ್ಕಳ ಮನಸ್ಸಿಗೆ ಆಗಲೇ ಅಚ್ಚೊತ್ತಲು ಒಂದುಕಡೆ ಸರಕಾರವೇ ಅವಕಾಶ ನೀಡುತ್ತಿದ್ದೆ. ಹಲವು ತಪ್ಪುಗಳು ತನ್ನಲ್ಲಿ ಇಟ್ಟುಕೊಂಡು ಸರಕಾರಿ ಶಾಲೆಗಳಿಗೆ ಕನ್ನಡ ಮಾಧ್ಯಮಗಳಿಗೆ ಜನಸಾಮಾನ್ಯರು ತಮ್ಮ ಮಕ್ಕಳನ್ನು ಕಳಿಸುವುದಿಲ್ಲ ಎಂದು ದೂರುವುದು ಸರಿ ಕಾಣುವುದಿಲ್ಲ.
ಈಗಿನ ಶಾಲೆ ಎಂದರೆ ಉದ್ಯೋಗಕ್ಕಾ ಓದು ಎನ್ನುವಂತಾಗಿಬಿಟ್ಟಿದೆ. ಜೀವನ ನಿರ್ವಹಣೆಗೆ ಉದ್ಯೋಗ, ತಿಳಿವಳಿಕೆಗಾಗಿ ಓದು ಎನ್ನುವುದನ್ನು ಮರೆತು ಹೋಗಿದೆ. ಸೌಲಭ್ಯಗಳ ಜೊತೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಆಟೋಟ, ಮನರಂಜಾನೆಯ ಜೊತೆ ಸ್ಪರ್ಧಾತ್ಮಕವಾದ ಚಟುವಟಿಕೆ ನೀಡುತ್ತಲೇ ಜೀವನ ನಡೆಸಲು ಬೇಕಾಗುವ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವಾಗಬೇಕು. ಸರಕಾರ ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯ ರೂಪಕ್ಕೆ ತಂದಾಗ ಮಾತ್ರ ಖಾಸಗಿ ಶಾಲೆಗೆ ಪೈಪೋಟಿ ನೀಡಬಹುದಾಗಿದೆ. ಇಲ್ಲವಾದಲ್ಲಿ ಕೆಲವು ಕಡೆ ಊರಿನಲ್ಲಿ ಮಕ್ಕಳಿಲ್ಲದೇ ಸರಕಾರಿ ಶಾಲೆ ಮುಚ್ಚಿದರೆ ಮತ್ತೆ ಕೆಲವು ಕಡೆ ಸರಕಾರದ ನಿಶ್ಕಾಳಜಿಯಿಂದಲೇ ಶಾಲೆಯ ಬಾಗಿಲು ಮುಚ್ಚುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಶಾಲೆಗಳು ಮುಚ್ಚುತ್ತಿವೆ ಎಂದು ಬೊಬ್ಬಿಡುವ ಮುನ್ನ ಆಗಬೇಕಾದ ವ್ಯವಸ್ಥೆಯ ಬಗ್ಗೆ ಗಮನವಿರಿಸಿದರೆ ಒಳಿತು.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).