ಕಾರವಾರ: ಇಲ್ಲಿನ ಸರ್ವರುತು ಬಂದರಿಗೆ ಕೊಂಕಣ ರೈಲ್ವೆ ಜೋಡಣೆ ಪ್ರಯತ್ನಗಳು ನಡೆಯುತ್ತಿವೆ. ಕೊಂಕಣ ರೈಲ್ವೆ 25 ವರ್ಷ ಪೂರೈಸಿದ ಸಂತಸದ ಬೆನ್ನ ಹಿಂದೆಯೇ ರೈಲ್ವೆ ಮಾರ್ಗ ದ್ವೀಪಥೀಕರಣ (ಡಬ್ಲಿಂಗ್‌) ಮತ್ತು ರೈಲ್ವೆ ಮಾರ್ಗ ವಿದ್ಯುತ್ತೀಕರಣ ಮಾಡುವ ಕಡೆಗೆ ತೀವ್ರ ಗತಿಯ ಯೋಜನೆಗಳನ್ನು ಅನುಷ್ಠಾನ ಮಾಡಲು ಮುಂದಾಗಿದೆ.

ಉತ್ತರ ಕನ್ನಡದಲ್ಲಿ ಡಬ್ಲಿಂಗ್‌ ಕಾಮಗಾರಿ ಮಾಡಲು ಕೊಂಕಣ ರೈಲ್ವೆಗೆ ಲಭ್ಯ ಇರುವ ಭೂಮಿಯ ಮಾಹಿತಿಯನ್ನು ಕೊಂಕಣ ರೈಲ್ವೆ ಪ್ರಧಾನ ಕಚೇರಿ ಪಡೆದಿದೆ. ಜೊತೆಗೆ ಮುರುಡೇಶ್ವರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಹಾಗೂ ಮಿರ್ಜಾನ್‌ನಲ್ಲಿ ಹೊಸ ರೈಲ್ವೇ ಸ್ಟೇಶನ್‌ ನಿರ್ಮಾಣಕ್ಕೆ ಸಹ ಮುನ್ನುಡಿ ಬರೆಯಲಾಗಿದೆ. ಕಾರವಾರ ಬಂದರಿಗೆ ಕೊಂಕಣ ರೈಲ್ವೆ ಮಾರ್ಗ ರೂಪಿಸುವ ಯೋಜನೆ 2007-08 ರಲ್ಲೇ ಸರ್ವೆ ಆಗಿದೆ. ಇದೀಗ 2017 ಮೇನಲ್ಲಿ ಹೊಸ ಸರ್ವೇ ಕಾರ್ಯಕ್ಕಾಗಿ ಕೊಂಕಣ ರೈಲ್ವೆ ಮತ್ತು ಬಂದರು ಇಲಾಖೆಯ ನಡುವೆ ಕಾಗದ ಪತ್ರ ವ್ಯವಹಾರ ನಡೆದಿದೆ. ಯೋಜನಾ ವೆಚ್ಚ 18 ಕೋಟಿಯಲ್ಲಿ ಸರ್ವೇಗಾಗಿ ಶೇ.2 ರಷ್ಟು ಹಣ ಠೇವಣಿ ಇರಿಸಲು ಮಾತ್ರ ಬಂದರು ಇಲಾಖೆ ಹಿಂದೇಟು ಹಾಕಿದೆ. ಕಾರವಾರದ ರೈಲ್ವೆ ಸ್ಟೇಶನ್‌ ಶಿರವಾಡದಿಂದ ಕಾರವಾರ ಬಂದರಿಗೆ 9 ಕಿ.ಮೀ. ಉದ್ದಕ್ಕೆ ರೈಲು ಮಾರ್ಗ ರೂಪಿಸುವ ಯೋಜನೆ ಇದಾಗಿದೆ. ಇದು 4 ಕಿ.ಮೀ. ಸುರಂಗ ಮಾರ್ಗವನ್ನು ಹೊಂದಿದೆ. ಕಾರವಾರದ ನಗರದ ಶಿರವಾಡ, ಕೆಳಗಿನ ಮಕ್ಕೇರಿ, ಶೇಜವಾಡ, ಹಬ್ಬುವಾಡ, ಗಾಂ ಧಿನಗರ, ಕೆಇಬಿ, ಲಿಂಗನಾಯಕನವಾಡ, ಕೋಡಿಬೀರ ಟೆಂಪಲ್‌ ಮಾರ್ಗವಾಗಿ ಬಂದರುತನಕ ರೈಲು ಮಾರ್ಗ ರೂಪಿಸಬೇಕಿದೆ. ಹೆಚ್ಚು ಮನೆಗಳಿಗೆ ಹಾನಿ ಮಾಡದೇ,
ಗುಡ್ಡದ ಬದಿಯಿಂದ ಈ ಮಾರ್ಗ ಬಂದರೂ, ಸ್ವಲ್ಪ ಮಟ್ಟಿನ ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕಿದೆ.

RELATED ARTICLES  ದೇಶಪಾಂಡೆ ಬಗ್ಗೆ ಅನಂದ ಅಸ್ನೋಟಿಕರ್ ಹೇಳಿಕೆ: ಕೆಂಡಾಮಂಡಲವಾದ ಕಾಂಗ್ರೆಸ್ ಮುಖಂಡರು.

ಬಂದರಿಗೆ ರೈಲು ಮಾರ್ಗ ಹಳೆಯ ಕನಸು: ಕಾರವಾರ ಬಂದರಿಗೆ ರೈಲು ಮಾರ್ಗ ರೂಪಿಸುವ ಕನಸು ದಶಕಗಳಷ್ಟು ಹಳೆಯದು. ಬ್ರಿಟಿಷರು ಕಾರವಾರದಲ್ಲಿ ಇರುವಾಗಲೇ ಬಂದರು ಅಭಿವೃದ್ಧಿ ಮತ್ತು ರೈಲು ಮಾರ್ಗದ ಕನಸು ಕಂಡಿದ್ದರು. ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗದ ಕನಸಿನಷ್ಟೇ ಹಳೆಯ ಕನಸು. ಕಾರವಾರ ಬಂದರಿಗೆ ರೈಲು ಮಾರ್ಗವನ್ನು ಜೋಡಿಸುವ ಕನಸು ಬ್ರಿಟಿಷರಿಗೆ ಇತ್ತು. ಆದರೆ ದಟ್ಟ ಕಾಡು ಕಾರಣದಿಂದ ಈ ಯೋಜನೆ ಕಾರ್ಯಗತವಾಗಿರಲಿಲ್ಲ.

ಕೊಂಕಣ ರೈಲ್ವೆ ರೂಪಿತವಾದಾಗ ಮತ್ತೆ ಕಾರವಾರ ಬಂದರಿಗೆ ರೈಲು ಮಾರ್ಗ ಜೋಡಿಸುವ ಕನಸಿಗೆ ಗರಿ ಬಂತು. ಆದರೆ ಸರ್ವರುತು ಬಂದರು 2ನೇ ಹಂತ ಅಭಿವೃದ್ಧಿ ಕಾಣಲಿಲ್ಲ. 2007 ರಲ್ಲಿ ಸರ್ವೆ ಆದಾಗ ಯೋಜನಾ ವೆಚ್ಚ 8 ಕೋಟಿಯಾಗಿತ್ತು. ಈಗ ಇದರ ಯೋಜನೆ ವೆಚ್ಚ 18 ಕೋಟಿ ತುಲುಪಿದೆ. ಒಟ್ಟು ಯೋಜನಾ ವೆಚ್ಚ 90 ಕೋಟಿಗಳಷ್ಟು.

ಕಾರವಾರ ಬಂದರಿಗೆ ಕೊಂಕಣ ರೈಲು ಮಾರ್ಗ ಜೋಡಣೆಯಿಂದ ಉತ್ತರ ಕರ್ನಾಟಕದ ಸರಕು ಹೊರದೇಶಗಳಿಗೆ, ಹೊರ ರಾಜ್ಯಗಳಿಗೆ ರಫ್ತು ಮಾಡಲು ಅನುಕೂಲವಾಗಲಿದೆ. ಹಾಗೆಯೇ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಬೃಹತ್‌ ಕಾರ್ಖಾನೆಗಳಿಗೆ, ಕೈಗಾ, ಸೀಬರ್ಡ್‌ ಯೋಜನೆಗೆ ಬೇಕಾದ ಯಂತ್ರಗಳನ್ನು ಕಾರವಾರ ಬಂದರಿಗೆ ತರಿಸಿಕೊಂಡು ಅವುಗಳನ್ನು ರೈಲ್ವೆ ಮಾರ್ಗದ ಮೂಲಕ ಸಾಗಿಸಬಹುದಾಗಿದೆ. ಬಂದರಿನ ಆದಾಯ ನೂರು ಪಟ್ಟು ಹೆಚ್ಚಲಿದೆ.

RELATED ARTICLES  ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ಮಾರಿಜಾತ್ರಾ ಮಹೋತ್ಸವ ಪ್ರಾರಂಭ.

ಕೊಂಕಣ ರೈಲ್ವೆ ಮಾರ್ಗವನ್ನು ಕೈಗಾವರೆಗೆ ವಿಸ್ತರಿಸಬಹುದಾಗಿದೆ. ಆದರೆ ಬಂದರು ಇಲಾಖೆ, ಸಚಿವಾಲಯ ಮಾತ್ರ ಬೇಕಾದಷ್ಟು ಆಸಕ್ತಿ ತೋರುತ್ತಿಲ್ಲ. ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಕೈಗಾ 5-6 ಯೋಜನೆ ಅನುಷ್ಠಾನದ ಜೊತೆಗೆ ರೈಲು ಮಾರ್ಗಗಳ ಸಬಲೀಕರಣ ಮತ್ತು ಪಶ್ಚಿಮ ಕರಾವಳಿಯ ರಕ್ಷಣೆಗೆ ಹೆಚ್ಚು ಮಹತ್ವ ನೀಡಿದೆ. ಸಾಗರ ಮಾಲಾ ಯೋಜನೆಯಲ್ಲಿ 50 ಕೋಟಿ ರೂ. ನೀಡಲು ಮುಂದೆ ಬಂದಿದೆ. ಅಲ್ಲದೇ ಕಾರವಾರ ಬಂದರಿನಲ್ಲಿ ವಾಣಿಜ್ಯ ನೌಕೆ ಹಾಗೂ ಯುದ್ಧ ನೌಕೆ ನಿಲ್ಲಿಸಲು ಅನುಕೂಲವಾಗುವಂತೆ ಹಡಗುತಾಣ ವಿಸ್ತರಿಸಲು 25 ಕೋಟಿ ನೀಡಿದೆ. ಇದಕ್ಕೆ 12 ಕೋಟಿ ಈಗಾಗಲೇ ಬಿಡುಗಡೆ ಮಾಡಿದೆ. ಹಾಗಾಗಿ ಕಾರವಾರ ಬಂದರು ಅಭಿವೃದ್ಧಿಯ ಭಾಗವಾಗಿ ಬಂದರಿನ ಪಶ್ಚಿಮಕ್ಕೆ 1010 ಮೀಟರ್‌ ಹಾಗೂ ಉತ್ತರಕ್ಕೆ 145 ಉದ್ದದ ಅಲೆ ತಡೆಗೋಡೆಗಳ ನಿರ್ಮಾಣ, 5 ಬೃಹತ್‌ ಹಡಗು ನಿಲ್ಲಲು ಬರ್ತ(ಧಕ್ಕೆ) ನಿರ್ಮಾಣ ಹಾಗೂ ಬಂದರಿಗೆ ರೈಲು ಮಾರ್ಗ ಜೋಡಿಸುವ ಕಾಮಗಾರಿಗಳಿಗೆ ಹಸಿರು ನಿಶಾನೆ ತೋರಲಿದೆ.