ಶ್ರವಣಬೆಳಗೊಳದ ಗೊಮ್ಮಟೇಶ್ವರನ ಬೃಹತ್ ಮೂರ್ತಿಯದು ವಿಶ್ವಪ್ರಸಿದ್ಧಿ. ಕಾರ್ಕಳ, ವೇಣೂರು, ಧರ್ಮಸ್ಥಳದ ಗೊಮ್ಮಟ ಮೂರ್ತಿಗಳೂ ತಮ್ಮ ಗಾಂಭೀರ್ಯದಿಂದ, ಸ್ನಿಗ್ಧ ಸೌಂದರ್ಯದಿಂದ ಸಹೃದಯರ ಗಮನಸೆಳೆದಿವೆ. ಈ ಗೊಮ್ಮಟರ ಜನಪ್ರಿಯತೆಯ ಪ್ರಭಾವಳಿಯಲ್ಲಿ, ತೆರೆಮರೆಯಲ್ಲಿಯೇ ಉಳಿದಿರುವುದು ಮಂಡ್ಯದ ಪಾಂಡವಪುರಕ್ಕೆ ಸಮೀಪದ ಹೊಸಕೋಟೆಯ ಗೊಮ್ಮಟೇಶ್ವರ.

ಕನ್ನಂಬಾಡಿಯ ಹಿನ್ನೀರಿಗೆ ಅಂಟಿಕೊಂಡಿರುವ ಸಣ್ಣ ಹಳ್ಳಿ ಹೊಸಕೋಟೆ. ಬಸದಿ ಹೊಸಕೋಟೆ ಎಂದೂ ಇದನ್ನು ಕರೆಯುವರು. ಶ್ರವಣಬೆಳಗೊಳದಷ್ಟೇ ಕಲಾತ್ಮಕವಾದ ಬಾಹುಬಲಿಯ ವಿಗ್ರಹ ಇಲ್ಲಿದೆ. ಸುಮಾರು 18 ಅಡಿ ಎತ್ತರವಿರುವ ಈ ವಿಗ್ರಹ ನೋಡಲು ನಯನ ಮನೋಹರ. ಇದರ ರಚನೆ 12ನೇ ಶತಮಾನದಲ್ಲಿ ಆಗಿರಬಹುದು ಎನ್ನುವುದಕ್ಕೆ ಪುರಾವೆಗಳು ದೊರಕಿದೆ.

RELATED ARTICLES  ಬೈಕ್ ಅಪಘಾತ: ಪರಮೇಶ್ವರ ಹೆಗಡೆ ಸಾವು

ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ಅರಸನಾದ ಬಿಟ್ಟಿದೇವನ (ವಿಷ್ಣುವರ್ಧನ) ಪ್ರಧಾನ ಮಂತ್ರಿಯಾದ ಪುಣಿಸಾಮಯ್ಯ ಈ ಸ್ಥಳದಲ್ಲಿ ಒಂದು ಜೈನಧರ್ಮ ಕ್ಷೇತ್ರವನ್ನು ಸ್ಥಾಪಿಸಿ, ಅದರ ದೈನಂದಿನ ನಿರ್ವಹಣೆಗಾಗಿ ಸುತ್ತಮುತ್ತಲಿನ ಹಳ್ಳಿಗಳನ್ನು ದೇಣಿಗೆಯಾಗಿ ನೀಡಿದ್ದರು ಎನ್ನುವ ವಿವರಗಳನ್ನುಳ್ಳ ಶಾಸನಗಳು ದೊರೆತಿವೆ. ಆದರೆ, ನಾಡಿನ ಮಹತ್ವದ ಜೈನ ಕ್ಷೇತ್ರಗಳಲ್ಲೊಂದಾಗಬೇಕಿದ್ದ ಹೊಸಕೋಟೆ ಕಾಲದ ಪ್ರವಾಹದಲ್ಲಿ ಮೂಲೆಗುಂಪಾಗಿಬಿಟ್ಟಿದೆ.

ಕನ್ನಂಬಾಡಿಯ ಹಿನ್ನೀರಿನ ದಡದಲ್ಲಿ ಚಾಚಿರುವ ಸುಂದರವಾದ ಮರಗಳ ಕೆಳಗೆ ನೋಡಸಿಗುವ ಈ ಸ್ಥಳ ನಿಜವಾಗಿಯೂ ಮನಮೋಹಕ. ಇಲ್ಲಿನ ಬಾಹುಬಲಿಯ ವಿಗ್ರಹವನ್ನು ಹಸಿರು ಬಣ್ಣದ ಕಲ್ಲಿನಿಂದ ಕೆತ್ತಲಾಗಿದೆ. ನೋಡಲು ಇತರೆ ಗೊಮ್ಮಟೇಶ್ವರನ ಮೂರ್ತಿಗಳಂತೆ ಕಂಡುಬಂದರೂ ಇದರಲ್ಲಿ ಹಲವಾರು ವಿಶೇಷಗಳಿವೆ. ಬಾಹುಬಲಿಯ ಕಾಲುಗಳನ್ನು ಬಳಸುವ ಬಳ್ಳಿಗಳೂ ಭಿನ್ನವಾಗಿವೆ. ವಿಗ್ರಹವು ಬಲಕ್ಕೆ ವಾಲಿಕೊಂಡಂತೆ ಭಾಸವಾಗುವುದು ಕೂಡ ವಿಶೇಷವೇ.

RELATED ARTICLES  ಹರಕೆ ತೀರಿಸಲು ಬಂದಾತ ಮಸಣ ಸೇರಿದ.

ಗೊಮ್ಮಟೇಶ್ವರನ ಸಮೀಪದಲ್ಲಿ ಹಲವಾರು ಜೈನ ಬಸದಿಗಳ ಪಳೆಯುಳಿಕೆಗಳಿವೆ. ಸ್ಥಳಪುರಾಣದ ಪ್ರಕಾರ ಇಲ್ಲಿ ಹೊಯ್ಸಳರ ಕಾಲದ ಐದು ಮುಖ್ಯ ತೀರ್ಥಂಕರರ ಬಸದಿಗಳನ್ನು ನಿರ್ಮಿಸಲಾಗಿತ್ತು. ಅವುಗಳೆಲ್ಲ ಅವನತಿಯ ಅಂಚನ್ನು ತಲುಪಿವೆ. ಬಸದಿಯ ಬೃಹತ್ ಕಟ್ಟಡಗಳು ಕುಸಿದುಬಿದ್ದಿದ್ದು, ಕೆಲವು ಮಂಟಪಗಳು ಮಾತ್ರ ನೋಡಸಿಗುತ್ತವೆ. ತೀರ್ಥಂಕರರ ಮೂರ್ತಿಗಳು ಮತ್ತು ಇತರೆ ಶಿಲ್ಪಗಳು ಅನಾಥವಾಗಿ ಅಲ್ಲಿಲ್ಲಿ ಕಂಡುಬರುತ್ತವೆ.