ಕಾರವಾರ, ನವೆಂಬರ್ 18: ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 5 ಮತ್ತು 6 ನೇ ಘಟಕದ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿದೆ. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೈಗಾ ಅಣು ಸ್ಥಾವರದ ಪ್ರಭಾರ ಸ್ಥಾನಿಕ ನಿರ್ದೇಶಕ ಸಂಜಯಕುಮಾರ್, ದೇಶದಾದ್ಯಂತ 10 ಅಣು ವಿದ್ಯುತ್ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.
ಅದರಂತೆ ಕೈಗಾದದಲ್ಲಿ ತಲಾ 700 ಮೆಗಾವ್ಯಾಟ್ ಅಣು ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಎರಡು ಘಟಕಗಳು ನಿರ್ಮಾಣವಾಗಲಿದೆ. ಈಗಾಗಲೇ ಕಳೆದ ಮೂರು ವರ್ಷಗಳಿಂದ ಮೆಕಾನ್ ಎಂಬ ಸಂಸ್ಥೆ ಇಲ್ಲಿ ಸಮೀಕ್ಷೆ ನಡೆಸಿ, ಈ ಎರಡು ಘಟಕಗಳ ಸ್ಥಾಪನೆಯ ಕುರಿತು ಅಧ್ಯಯನ ನಡೆಸಿದೆ. ಮುಂಬರುವ ಜನವರಿಯಲ್ಲಿ ಪರಿಸರ ಅಧ್ಯಯನದ ಕುರಿತ ವರದಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅರಣ್ಯ ಇಲಾಖೆಗೆ ಸಲ್ಲಿಸಿಲಾಗುತ್ತದೆ.
ಬಳಿಕ ಸಾರ್ವಜನಿಕ ಅಹವಾಲು ಸಭೆ ನಡೆಸಿ, ಅದರ ವರದಿಯನ್ನು ಭಾರತೀಯ ಅಣು ವಿದ್ಯುತ್ ನಿಗಮ (ಎನ್ ಪಿಸಿಐಲ್)ಗೆ ಕಳುಹಿಸಲಾಗುತ್ತದೆ. ಅದು ಕೇಂದ್ರ ಪರಿಸರ ಸಚಿವಾಲಯ ಹಾಗೂ ಅರಣ್ಯ ಸಚಿವಾಲಯಕ್ಕೆ ಅನುಮತಿಗಾಗಿ ಕಳುಹಿಸಲಿದೆ ಎಂದು ತಿಳಿಸಿದರು. ಮೊದಲೇ ಈ ಆರು ಘಟಕಗಳಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಮತ್ತೆ ಭೂ ಸ್ವಾಧೀನ ಮಾಡಿಕೊಳ್ಳುವ ಅಗತ್ಯ ಇಲ್ಲ. ಇರುವ ವಿದ್ಯುತ್ ಮಾರ್ಗವನ್ನೇ ಮೇಲ್ದರ್ಜೆಗೇರಿಸಿ, ಕಾರ್ಯ ಪ್ರಾರಂಭ ಮಾಡಲಿದ್ದೇವೆ ಎಂದು ಸಂಜಯಕುಮಾರ್ ತಿಳಿಸಿದರು.
ದೇಶದಲ್ಲಿ ಕೈಗಾ ಅಣು ಸ್ಥಾವರ ಹೆಚ್ಚು ಸುಂದರ ಹಾಗೂ ಹೆಚ್ಚು ಸುರಕ್ಷಿತ ಘಟಕವಾಗಿದೆ. ಇಲ್ಲಿನ ಅಧಿಕಾರಿಗಳ ಶ್ರಮದಿಂದಾಗಿ ಕೈಗಾ ಸ್ಥಾವರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 1ನೇ ಘಟಕ ನಿರಂತರವಾಗಿ 553 ದಿನ, 2ನೇ ಘಟಕ 529, 3ನೇ ಘಟಕ 409, 4ನೇ ಘಟಕ 541 ದಿನಗಳವರೆಗೆ ವಿದ್ಯುತ್ ಉತ್ಪಾದಿಸುತ್ತಿವೆ ಎಂದು ಅವರು ತಿಳಿಸಿದರು. ಭಾರತದಲ್ಲಿ ಅಣು ವಿದ್ಯುತ್ ಸ್ಥಾವರಗಳು ಅತೀ ಉತ್ತಮವಾಗಿ ಹಾಗೂ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿವೆ.
ಕಲ್ಲಿದ್ದಲು ಆಧಾರಿತ ಘಟಕಗಳಿಗೆ ಹೆಚ್ಚು ಭವಿಷ್ಯ ಇಲ್ಲ. ಕೈಗಾ ಸ್ಥಾವರದಿಂದಾಗಿ ಪರಿಸರದ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದುರ ಬಗ್ಗೆ ಸಾರ್ವಜನಿಕರೇ ಖುದ್ದು ತಿಳಿಯಲು ಅನುಕೂಲವಾಗುವಂತೆ ಬಾಬಾ ಅಣು ವಿದ್ಯುತ್ ಸಂಶೋಧನಾ ಕೇಂದ್ರ ಹಾಗೂ ಭಾರತೀಯ ಪರಿಸರ ವಿಕಿರಣ ಮೇಲ್ವಿಚಾರಣಾ ವ್ಯವಸ್ಥೆಯ ಸಂಸ್ಥೆ (ಇಂಡಿಯನ್ ಎನ್ವಿರಾನ್ಮೆಂಟಲ್ ರೇಡಿಯೇಶನ್ ಮಾನಿಟರಿಂಗ್ ಸಿಸ್ಟಮ್ ಕಂಪೆನಿ) ಕೈಗಾದಲ್ಲಿ ವಿಕಿರಣ ಪ್ರಮಾಣ ಅಳೆಯಲು ಉಪಕರಣವನ್ನು ಅಳವಡಿಸಿದ್ದಾರೆ. ಅದರನ್ವಯ ಕೈಗಾದಲ್ಲಿ ವಿಕಿರಣ ಪ್ರಮಾಣ ಸಾಮಾನ್ಯ ಮಟ್ಟದಲ್ಲಿದೆ. ಇದರಿಂದ ಸಾರ್ವಜನಿಕರ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಂಜಯಕುಮಾರ್ ಸ್ಪಷ್ಟಪಡಿಸಿದರು.