ದಾವಣಗೆರೆ: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿಯಲ್ಲಿ ಅಂತಿಮಗೊಳಿಸಲಾಗುವುದು ಮತ್ತು ಫೆಬ್ರವರಿ ತಿಂಗಳಲ್ಲಿ 2018ನೇ ಸಾಲಿನ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಇಂದು ಚೆನ್ನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮುಂದಿನ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತದೆ. ಹೀಗಾಗಿ ಫೆಬ್ರವರಿಯಲ್ಲಿ ಬಜೆಟ್ ಮಂಡಿಸುತ್ತಿದ್ದೇನೆ. ಹೇಗಿದ್ದರೂ ಅದು ಎಲೆಕ್ಷನ್ ಬಜೆಟ್ ಅಂತ ಕರೆಯುಲ್ಪಡುತ್ತದೆ ಎಂದರು.
ಮುಂದಿನ ವರ್ಷ ಜನವರಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತೇವೆ. ನಮ್ಮಲ್ಲಿ 224 ಅಲ್ಲ 480 ಕ್ಷೇತ್ರಗಳಿಗೆ ಸ್ಪರ್ಧಿಸಲು ಅಭ್ಯರ್ಥಿಗಳಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಅತ್ಯಂತ ದುರ್ಬಲ ಪಕ್ಷವಾಗಿದ್ದು, ಅವರಿಗೆ ಸರಿಯಾಗಿ ಅಭ್ಯರ್ಥಿಗಳೆ ಸಿಗುತ್ತಿಲ್ಲ. ಬಿಜೆಪಿಯ ಸಾಕಷ್ಟು ಮುಖಂಡರು ನನ್ನ ಜತೆ ಸಂಪರ್ಕದಲ್ಲಿದ್ದಾರೆ ಎಂದು ಸಿಎಂ ತಿಳಿಸಿದರು.
ವೈದ್ಯರು ತಪ್ಪು ಗ್ರಹಿಕೆಯಿಂದ ಮುಷ್ಕರ ನಡೆಸಿದ್ದರು. ಅವರೊಂದಿಗೆ ಸಮಾಲೋಚನೆ ನಡೆಸಿ ಆ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಸರ್ಕಾರ ಯೂನಿವರ್ಸಲ್ ಹೆಲ್ತ್ ಸ್ಕಿಂ ಅನ್ನು ಜಾರಿಗೊಳಿಸಲು ವೈದ್ಯರು ಒಪ್ಪಿಗೆ ನೀಡಿದ್ದಾರೆ. ಅದಕ್ಕೆ ದರ ನಿಗದಿಪಡಿಸುವುದು ಸರ್ಕಾರ’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಓಟು, ಸೀಟಿಗಾಗಿ ಸಿಎಂ ಸಿದ್ದರಾಮಯ್ಯ ಮತ್ತೊಬ್ಬರ ಬೂಟು ನೆಕ್ಕಲು ಹಿಂಜರಿಯುವದಿಲ್ಲ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅವರ ಮಾತು ಕೇಳಿದರೆ ಏನು ಅನ್ಸುತ್ತೆ? ನಾಗರಿಕತೆ ಇಲ್ಲದ ಅನಾಗರಿಕ, ಸಂಸ್ಕೃತಿಯೇ ಇಲ್ಲದ ಮನುಷ್ಯ,ಅದಕ್ಕಿಂತ ಹೆಚ್ಚು ನಾನೇನು ಹೇಳುವುದಿಲ್ಲ ಕಿಡಿ ಕಾರಿದರು.