ವಿಜಯಪುರ: ಛಟ್ಟಿ ಅಮಾವಾಸ್ಯೆ ಕಾರಣದಿಂದ, ಶನಿವಾರ ನಡೆಯಬೇಕಿದ್ದ ವಿಜಯಪುರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಇದೇ 28ಕ್ಕೆ ಮುಂದೂಡಲಾಗಿದೆ.

ಮೌಢ್ಯ ನಿಷೇಧ ಮಸೂದೆಗೆ ವಿಧಾನಸಭೆ ಅನುಮೋದನೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ ನೇತೃತ್ವದ ಜಿಲ್ಲಾ ಪಂಚಾಯ್ತಿ ಆಡಳಿತದ ಈ ನಿರ್ಧಾರ ಸಾಕಷ್ಟು ಟೀಕೆಗೀಡಾಗಿದೆ. ಆದರೆ ಜಿಲ್ಲಾ ಪಂಚಾಯ್ತಿಯ ಬಹುತೇಕ ಸದಸ್ಯರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

‘ಸಾಮಾನ್ಯ ಸಭೆ ಆಯೋಜಿಸುವ ಮುಖ್ಯ ಯೋಜನಾಧಿಕಾರಿ ಕಚೇರಿಯ ಸಿಬ್ಬಂದಿ, ಮೊಬೈಲ್‌ಗೆ ಕರೆ ಮಾಡಿ ಅಮಾವಾಸ್ಯೆ ಇರುವುದರಿಂದ ಶನಿವಾರದ ಸಭೆ ಮುಂದೂಡಲಾಗಿದೆ ಎಂದು ಹೇಳಿದರು. ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದೇ ತೋಚದಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ತಿಳಿಸಿದರು.

RELATED ARTICLES  ಅಂಕೋಲಾ, ಕುಮಟಾ, ಯಲ್ಲಾಪುರದಲ್ಲಿ ನಡೆದ ಅಪಘಾತಗಳು.

‘ಒಂದೆಡೆ ಸರ್ಕಾರ ಮೌಢ್ಯ ನಿಷೇಧಿಸಲು ಕಾನೂನು ಮಾಡುತ್ತಿದೆ. ಇನ್ನೊಂದೆಡೆ ಜಿಲ್ಲಾ ಪಂಚಾಯ್ತಿ ಆಡಳಿತವೇ ಮೌಢ್ಯ ಆಚರಣೆಯನ್ನು ಬೆಂಬಲಿಸುತ್ತಿದೆ. ಸಭೆ ನಿಗದಿಪಡಿಸುವ ಮುನ್ನವೇ ಪೂರ್ವಾಪರ ಆಲೋಚಿಸಬೇಕಿತ್ತು. ಈ ನಿರ್ಧಾರದಿಂದ ಆಡಳಿತ ಯಂತ್ರಕ್ಕೆ ಘನತೆ–ಗಾಂಭೀರ್ಯವೇ ಇಲ್ಲದಂತಾಗಿದೆ. ಜನ ಹಿತವನ್ನೇ ಜನಪ್ರತಿನಿಧಿಗಳು ಮರೆತಿದ್ದು ನಿಜಕ್ಕೂ ಶೋಚನೀಯ ಸಂಗತಿ’ ಎಂದು ಅವರು ಹೇಳಿದರು.

‘ಅಧ್ಯಕ್ಷೆ ನೀಲಮ್ಮ ಮೇಟಿ, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಅಮಾವಾಸ್ಯೆ ದಿನವೇ ಸಭೆ ನಿಗದಿಪಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ನಾವು, ‘ಅಮಾವಾಸ್ಯೆ ಇರುವುದರಿಂದ ನಾವು ಬರುವುದಿಲ್ಲ. ನೀವೇ ಸಭೆ ನಡೆಸಿಕೊಳ್ಳಿ’ ಎಂದು ಹೇಳಿದ್ದೆವು. ಇದರಿಂದಾಗಿ ಸಭೆ ಮುಂದೂಡಿದ್ದಾರೆ’ ಎಂದು ಕನಮಡಿ ಜಿ.ಪಂ. ಕ್ಷೇತ್ರದ ಬಿಜೆಪಿ ಸದಸ್ಯ ಸಾಬು ಮಾಶ್ಯಾಳ ತಿಳಿಸಿದರು.

RELATED ARTICLES  ಮುಳ್ಳೇರ್ಯ ಹವ್ಯಕ ಮಂಡಲ ಸಮಾವೇಶ

ಮೂರ್ಖತನದ ಪರಮಾವಧಿ: ‘ಸಾಮಾನ್ಯ ಸಭೆ ಮುಂದೂಡಿದ್ದು ಮೂರ್ಖತನದ ಪರಮಾವಧಿ. ವೈಜ್ಞಾನಿಕ ಯುಗದಲ್ಲೂ ಹೀಗೆ ಮಾಡುತ್ತಾರೆಂದರೆ ಏನು ಹೇಳಬೇಕು? ಜನಪ್ರತಿನಿಧಿಗಳು, ಅಧಿಕಾರಿಗಳು ಇಂದಿಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳದಿರುವುದು ದೊಡ್ಡ ದುರಂತ’ ಎಂದು ಎಐಡಿಎಸ್‌ಒ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್‌.ಟಿ.ಭರತ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.