ಗೋಕರ್ಣ: ಇಲ್ಲಿನ ಬಸ್ ನಿಲ್ದಾಣದ ಆವರಣದ ತುಂಬೆಲ್ಲಾ ಪ್ಲಾಸ್ಟಿಕ್ ಇನ್ನಿತರೆ ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಶ್ರೀಕ್ಷೇತ್ರಕ್ಕೆ ಬರುವ ಪ್ರಯಾಣಿಕರು ಇದನ್ನು ಕಂಡು ಅಸಹ್ಯ ಪಡುವಂತಾಗಿದೆ. ಇಲ್ಲಿನ ದುರವಸ್ಥೆಗೆ ಸ್ಥಳೀಯರು ಹಾಗೂ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಈ ನಿಲ್ದಾಣದಲ್ಲಿ ಖಾಸಗಿ ವಾಹನಗಳೂ ಸಂಚರಿಸುತ್ತಿವೆ. ಅಲ್ಲದೇ ಅವುಗಳನ್ನು ನಿಲ್ದಾಣದೊಳಗೆ ನಿಲ್ಲಿಸಿ ಹೋಗುತ್ತಿದ್ದಾರೆ. ಖಾಸಗಿ ವಾಹನದ ನಿಲುಗಡೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಸ್ವಚ್ಛತೆ ಮಾತ್ರ ಇಲ್ಲಿ ಮರೆಯಾಗಿದೆ. ಕೆಲ ಬಸ್ ನಿರ್ವಾಹಕರು ಹಾಗೂ ಚಾಲಕರು ನಿಲ್ದಾಣದ ಪರಿಸ್ಥಿತಿ ನೋಡಲಾಗದೇ ತಾವೇ ಸ್ವತಃ ಸ್ವಚ್ಛತಾ ಕಾರ್ಯ ಮಾಡಿದ ನಿದರ್ಶನಗಳಿವೆ.
ಸ್ವಚ್ಛತೆಗೆ ಕ್ರಮ ಕೈಗೊಳ್ಳಲಿ: ‘ಬಸ್ ನಿಲ್ದಾಣದ ಆವರಣ ಅನೈರ್ಮಲ್ಯದಿಂದ ಕೂಡಿದೆ. ಸ್ಥಳೀಯರಿಗಿಂತ ಅಧಿಕ ಯಾತ್ರಾರ್ಥಿಗಳೇ ಹೊಲಸು ಮಾಡಿ ಹೋಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಸ್ವಚ್ಛತೆ ಕಾಪಾಡಬೇಕು’ ಎನ್ನುತ್ತಾರೆ ಸ್ಥಳೀಯ ಪ್ರಯಾಣಿಕ ವಿನಾಯಕ ರಾಯ್ಕರ್.