ಕಾರವಾರ:ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಉಂಟಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಅಣು ಸ್ಥಾವರ ವ್ಯಾಪ್ತಿಯ ಕುಚೇಗಾರ್ ಗ್ರಾಮದಲ್ಲಿ ಶನಿವಾರ ಅಣಕು ಪ್ರದರ್ಶನ ನಡೆಸಲಾಯಿತು.

ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರದ ನೇತೃತ್ವದಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಮಾರ್ಗಸೂಚಿಯಂತೆ ಪ್ರತಿ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ವಿಪತ್ತು ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಣಕು ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು. ಕೈಗಾದಲ್ಲಿ ನಡೆಯುತ್ತಿರುವ 11ನೇ ಅಣಕು ಪ್ರದರ್ಶನದಲ್ಲಿ ಕೆ.ಜಿ.ಎಸ್-1 (ಅಣು ವಿದ್ಯುತ್ ಘಟಕ 1) ರಿಂದ ಉದ್ಭವಿಸಬಹುದಾದ ಸಂಭಾವ್ಯ ಕಲ್ಪಿತ ಘಟನೆಗಳನ್ನು ಆಧರಿಸಿ ಸಂಬಂಧಿತ ಎನ್.ಪಿ.ಸಿ.ಐ.ಲ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಕಾರ್ಯಾಚರಣೆ ಮತ್ತು ತುರ್ತುಪರಿಸ್ಥಿಯನ್ನು ಸಮರ್ಥವಾಗಿ ಎದುರಿಸುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಾಯಿತು.

RELATED ARTICLES  ಕಾಂಗ್ರೆಸ್ ಎಂದರೆ ಮೋಸ ಎನ್ನಿಸಿದೆ : ಶಿವಾನಂದ ಹೆಗಡೆ ಕಡತೋಕಾ

ಕೆ.ಜಿ.ಎಸ್-1 ರಿಂದ ಬೆಳಿಗ್ಗೆ 6.30ಕ್ಕೆ ಸೋರಿಕೆಯಾದ ವಿಕಿರಣವು ಕ್ರಮೇಣ ಇಡೀ ಕೈಗಾ ಕ್ಷೇತ್ರ ವಿಸ್ತರಿಸುತ್ತಿದ್ದಂತೆ ಅಲ್ಲಿನ ಶಿಪ್ಟ್ ಚಾಜ್ ಎಂಜಿನಿಯರ್ ತುರ್ತು ಪರಿಸ್ಥಿತಿ ಇದೆ ಎಂದು ಸಲಹಾ ಸಿಬ್ಬಂದಿ, ಸಹಾಯಕ ಸಿಬ್ಬಂದಿ, ಅಣುಶಕ್ತಿ ಇಲಾಖೆಯ ವಿಪ್ಪತ್ತು ನಿರ್ವಹಣಾ ಕೇಂದ್ರ, ಭಾರತೀಯ ಅಣುಶಕ್ತಿ ನಿಗಮದ ವಿಪ್ಪತ್ತು ನಿರ್ವಹಣಾ ಕೇಂದ್ರ ಹಾಗೂ ಜಿಲ್ಲಾಧಿಕಾರಿಗೆ ಮಾಹಿತಿ ರವಾನಿಸಿದರು. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸ್ಥಳೀಯ ವಿಕಿರಣ ಮಟ್ಟವನ್ನು ಆಧರಿಸಿ 7.46 ಕ್ಕೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು.

ಕುಚೇಗಾರ್ ಗ್ರಾಮವು ವಿಕಿರಣ ಪ್ರಭಾವಕ್ಕೊಳಗಾಗಿದೆ ಎಂದು ಪತ್ತೆ ಹಚ್ಚಿದ ಆಧಿಕಾರಿಗಳು ತಕ್ಷಣ ಅವರನ್ನು ಸುರಕ್ಷಿತವಾದ ಗೋಪಾಲ ನಗರಕ್ಕೆ ಶಿಫ್ಟ್ ಮಾಡಲು ಸೂಚಿಸಲಾಯಿತು.
ಬಳಿಕ ಗ್ರಾಮಸ್ಥರನ್ನು ವಿಕಿರಣಮುಕ್ತವಾಗಿಸುವ ಕಾರ್ಯ ಹಾಗೂ ಅವರಿಗೆ ಅಗತ್ಯ ವೈದ್ಯಕೀಯ ನೆರವು, ಆಹಾರ, ರಕ್ಷಣೆ ನೀಡಲಾಯಿತು. ರಾಜ್ಯ ಸರಕಾರದ ಪೊಲೀಸ್ ಇಲಾಖೆ, ಕಂದಾಯ, ಅರಣ್ಯ, ರಸ್ತೆ ಸಾರಿಗೆ, ವೈದ್ಯಕೀಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗೂ ಇನ್ನುಳಿದ ಕೆಲವು ಇಲಾಖೆ ಅಧಿಕಾರಿಗಳು ನಿಗದಿಪಡಿಸಿದ ಕಾರ್ಯಗಳನ್ನು ನಿರ್ವಹಿಸಿದರು. ಬಳಿಕ ವಿಕಿರಣ ಸೋರಿಕೆ ತಡಗಟ್ಟಿ ತುರ್ತು ಪರಿಸ್ಥಿತಿ ನಿವಾರಣೆಯಾಗಿ ಯಥಾ ಸ್ಥಿತಿ ಮರಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

RELATED ARTICLES  ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು.

ಬಳಿಕ ವಿಭಾಗದಲ್ಲಿ ವಿಕಿರಣ ಮಟ್ಟವು ಸಾಮನ್ಯವಾಗಿದೆಯೆಂಬುದನ್ನು ಖಚಿತ ಪಡಿಸಿಕೊಂಡು, ತುರ್ತು ಪರಿಸ್ಥಿತಿಯನ್ನು ಹಿಂದೆ ತೆಗೆದುಕೊಳ್ಳಲಾಯಿತು. ಕಾರ್ಯಾಚರಣೆಯಲ್ಲಿ ಎನ್‍ಡಿಆರ್‍ಎಫ್ 30 ಸಿಬ್ಬಂದಿ, ಅಣುಶಕ್ತಿ ಇಲಾಖೆಯ ವಿಪ್ಪತ್ತು ನಿರ್ವಹಣಾ ಕೇಂದ್ರ, ಭಾರತೀಯ ಅಣುಶಕ್ತಿ ನಿಗಮದ ವಿಪ್ಪತ್ತು ನಿರ್ವಹಣಾ ಕೇಂದ್ರ ಹಾಗೂ ನಗರಸಭೆ, ಕಂದಾಯ ಇಲಾಖೆ, ಪೊಲೀಸ್ ಸೇರಿದಂತೆ ಇನ್ನಿತರ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಕೈಗಾದ ನಿರ್ದೇಶಕ ಸಂಜಯ ಕುಮಾರ್, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಇದ್ದರು.