ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಪತ್ರಿಕೆ ಮುಂದುವರೆಸುವ ಬಗ್ಗೆ ಲಂಕೇಶ್ ಕುಟುಂಬದಲ್ಲಿಯೇ ಭಿನ್ನಾಭಿಪ್ರಾಯಗಳು ಆರಂಭವಾಗಿದೆ ಎನ್ನಲಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಮೂರು ತಿಂಗಳು ಕಳೆದಿದೆ. ಗೌರಿ ಲಂಕೇಶ್ ನಡೆಸುತ್ತಿರುವ ಲಂಕೇಶ್ ಪತ್ರಿಕೆ ಮುದ್ರಣ ಕಂಡಿಲ್ಲ. ಪತ್ರಿಕೆಯನ್ನು ಮುಂದುವರಿಸುವ ಕುರಿತಂತೆ ತಾಯಿ ಇಂದಿರಾ ಲಂಕೇಶ್ ಹಾಗೂಮಗಳು ಕವಿತಾ ಲಂಕೇಶ್ ನಡುವೆ ಭಿನ್ನಾಭಿಪ್ರಾಯವಿದೆ.
ಗೌರಿ ಲಂಕೇಶ್ ತಾಯಿ ಇಂದಿರಾ ಅವರು ಲಂಕೇಶ್ ಪತ್ರಿಕೆಯನ್ನು ಯಾರೂ ಮುನ್ನಡೆಸಬಾರದು ಎಂದು ನ್ಯಾಯಾಲಯದ ಆದೇಶ ತಂದಿದ್ದಾರೆ. ಲಂಕೇಶ್ ಅಥವಾ ಗೌರಿ ಹೆಸರಿನಲ್ಲಿ ಯಾರೂ ಪತ್ರಿಕೆ ನಡೆಸಬಾರದು ಎಂದು ಇಂಜಕ್ಷನ್ ತಂದಿದ್ದಾರೆ.
ಆದರೆ ಗೌರಿ ಸಹೋದರಿ ಕವಿತಾ ಲಂಕೇಶ್ ಪತ್ರಿಕೆಯ ಸಿಬ್ಬಂದಿಯ ಪರವಾಗಿದ್ದು, ಈ ಪತ್ರಿಕೆಯನ್ನು ಮತ್ತೆ ಆರಂಭಿಸಬೇಕು ಎಂದು ಹೇಳುತ್ತಾರೆ. ಲಕೇಶ್ ಪತ್ರಿಕೆಯನ್ನು ಗೌರಿ ಹೆಸರಲ್ಲಿ ಅಥವಾ ನಾನು ಗೌರಿ ಎಂಬ ಹೆಸರಲ್ಲಿ ಪತ್ರಿಕೆ ಮುಂದುವರೆಸುವುದರಲ್ಲಿ ಯಾವುದೇ ರೀತಿ ತೊಂದರೆಗಳಿಲ್ಲ ಎಂಬುದು ಅವರ ವಾದ.
ನಾನು ಗೌರಿ ಎಂಬ ಹೆಸರಿನಲ್ಲೇ ಪತ್ರಿಕೆ ಹೊರತರಲು ಅಲ್ಲಿನ ಕೆಲ ಸಿಬ್ಬಂದಿ ಈಗಾಗಲೇ ತಯಾರಿ ನಡೆಸಿದ್ದಾರೆ. ಇದಕ್ಕೆ ಕವಿತಾ ಬೆಂಬಲ ಕೂಡ ಇದೆ ಎನ್ನಲಾಗಿದೆ. ಆದರೆ ಈ ಪತ್ರಿಕೆಯನ್ನು ಗೌರಿ ಮಾತ್ರ ಹೊರತರಲು ಸಾಧ್ಯವಾಗಿದ್ದು, ಯಾರೂ ಮುನ್ನಡೆಸಬಾರದು ಎಂಬುದು ತಾಯಿಯ ಅಭಿಪ್ರಾಯವಾಗಿದೆ.