ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಸೋನಿಯಾಗಾಂಧಿ ನಿವಾಸದಲ್ಲಿ ನಾಳೆ ಮಹತ್ವದ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ಕರೆದಿರುವಂತೆಯೇ. ಡಿಸೆಂಬರ್ 5ರ ಒಳಗಾಗಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಉನ್ನತ ಮೂಲಗಳ ಮಾಹಿತಿಯಂತೆ, ನಾಳೆ ನಡೆಯಲಿರುವ ಸಭೆ ಅತ್ಯಂತ ಮಹತ್ವದ್ದಾಗಿದ್ದು, ನಾಳೆಯೇ ಅಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳಿಗೆ ಚಾಲನೆ ನೀಡಿ, ರೂಪುರೇಷೆ ಸಿದ್ದಪಡಿಸಲಾಗುವುದು ಎನ್ನಲಾಗಿದೆ.
ರಾಹುಲ್‌ಗೆ ಅಧ್ಯಕ್ಷ ಪಟ್ಟ ಕಟ್ಟುವುದು ಮತ್ತಷ್ಟು ತಡ ಮಾಡದೇ ಇರಲು ನಿರ್ಧರಿಸಲಾಗಿದ್ದು, ನಾಳಿನ ಸಭೆಯಲ್ಲೇ ಅಂತಿಮ ತೀರ್ಮಾನ ಕೈಗೊಂಡು, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಒಪ್ಪಿಗೆ ಪಡೆಯಲಾಗುವುದು ಎಂದು ವರದಿಯಾಗಿದೆ.
ಸೋನಿಯಾಗಾಂಧಿ ಅಧ್ಕಕ್ಷರಾಗುವ ವೇಳೆ ಮುನ್ನಡೆಸಿದ ಜಿತೇಂದ್ರ ಪ್ರಸಾದ್ ಅವರೇ ಈಗಲೂ ಸಹಜ ಚುನಾವಣಾ ಪ್ರಕ್ರಿಯೆಯನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಈಗ್ಗೆ ಒಂದು ವಾರದ ಹಿಂದೆ ರಾಹುಲ್‌ಗೆ ಪಟ್ಟ ಕಟ್ಟುವುದು ಮತ್ತಷ್ಟು ತಡವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಈ ವರದಿಯನ್ನು ತಳ್ಳಿಹಾಕಿರುವ ಮೂಲಗಳು, ಅಂತಹ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ ಎಂದಿದೆ.
1998ರಲ್ಲಿ ಎಐಸಿಸಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದ ಸೋನಿಯಾಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಸುಧೀರ್ಘ ಕಾಲ ಮುನ್ನಡೆಸಿದ್ದ ಏಕೈಕ ಅಧ್ಯಕ್ಷೆ ಎಂದು ಹೆಸರು ಗಳಿಸಿದ್ದಾರೆ.