ಹೊನ್ನಾವರ:ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಶುಕ್ರವಾರ ಸಾರ್ವಜನಿಕರು ಪ್ರತಿಭಟಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಿ.ಆರ್‌.ಗೌಡ ಕಳಪೆ ಕಾಮಗಾರಿಯನ್ನು ಕಣ್ಣಾರೆ ಕಂಡು ಕಾಮಗಾರಿಯನ್ನು ತಾತ್ಕಾಲಿಕವಾಗಿ ಬಂದ್‌ ಇಡುವಂತೆ ಗುತ್ತಿಗೆದಾರ ಹರಿನಾಥ ಅವರಿಗೆ ಸೂಚಿಸಿದರು.

ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆ ಮಧ್ಯೆ ತೆಗೆದ ಗುಂಡಿಯನ್ನು ಮಣ್ಣಿನಿಂದ ಮುಚ್ಚಲಾಗುತ್ತಿದ್ದು, ರಸ್ತೆಯನ್ನು ತಕ್ಷ ಣ ದುರಸ್ತಿ ಮಾಡಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ವಿನೋದ ನಾಯ್ಕ ರಾಯಲಕೇರಿ ಒಂದು ವಾರ ಗಡುವು ನೀಡಿ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ವಿನೋದ ನಾಯ್ಕ, ರಾಜು ಭಂಡಾರಿ, ಇಬ್ರಾಹಿಂ ಸಾಬ್‌, ಸಂಜಯ ಶೇಟ್‌, ಟಿ.ಎಸ್‌. ನಾಯ್ಕ ಮತ್ತಿತರರು ಪಟ್ಟಣ ಪಂಚಾಯಿತಿಗೆ ತೆರಳಿ ಡಾಂಬರೀಕರಣ ಯಾವಾಗ ಮಾಡುತ್ತೀರಿ ಎಂದು ಮುಖ್ಯಾಧಿಕಾರಿ ಅರುಣ ನಾಯ್ಕ ಅವರನ್ನು ಪ್ರಶ್ನಿಸಿದರು.

RELATED ARTICLES  ಅಘನಾಶಿನಿ ಆಕ್ರೋಶಕ್ಕೆ ಕೊಚ್ಚಿ ಹೋದ ಬ್ರಿಡ್ಜ್- ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರಿಂದ್ಲೇ ತಾತ್ಕಾಲಿಕ ಸೇತುವೆ

ಇದು ತಮಗೆ ಸಂಬಂಧಪಟ್ಟ ವಿಷಯವಲ್ಲ. ಡ್ರೈನೇಜ್‌ದವರಿಗೆ ಸಂಬಂಧಪಟ್ಟ ವಿಷಯ ಎಂದು ಮುಖ್ಯಾಧಿಕಾರಿ ಉತ್ತರಿಸಿದಾಗ ಸಾರ್ವಜನಿಕರು ಮರು ಪ್ರಶ್ನಿಸಿದರು. ಆಗ ಮುಖ್ಯಾಧಿಕಾರಿ ಅರುಣ ನಾಯ್ಕ ಉತ್ತರಿಸಿ, ಪ.ಪಂ. ಮೇಲುಸ್ತುವಾರಿ ಮಾತ್ರ ನೋಡುವುದು. ಉಳಿದಂತೆ ಕಾಮಗಾರಿಯನ್ನು ಒಳಚರಂಡಿ ವಿಭಾಗದವರೇ ನೋಡಿಕೊಳ್ಳುವರು ಎಂದರು.

ನಂತರ ಸಾರ್ವಜನಿಕರು ಹಾಗೂ ಮುಖ್ಯಾಧಿಕಾರಿ ಅರುಣ ನಾಯ್ಕ, ಪ,ಪಂ. ಕಿರಿಯ ಅಭಿಯಂತರ ಸದಾನಂದ ಸಾಳೇ ಹಿತ್ತಲ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ತಹಸೀಲ್ದಾರ ವಿ.ಆರ್‌. ಗೌಡ ಸಹ ಸ್ಥಳಕ್ಕೆ ಭೇಟಿ ನೀಡಿದರು. ಕಾಮಗಾರಿ ಪರಿಶೀಲಿಸಿದ ಪ.ಪಂ. ಕಿರಿಯ ಅಭಿಯಂತರರು ಕೂಡ ಇದು ಕಳಪೆ ಕಾಮಗಾರಿ ಎಂದು ಸಹಮತ ವ್ಯಕ್ತಪಡಿಸಿದರು.

RELATED ARTICLES  ಹಿಂದಿನ ಸರ್ಕಾರದ ಅವಧಿಯಲ್ಲಿ ಅತಿಹೆಚ್ಚು ಮನೆಗಳು ಮಂಜೂರಿ : ದಿನಕರ ಶೆಟ್ಟಿ

ಗುತ್ತಿಗೆದಾರ ಹರಿನಾಥ ಅವರನ್ನು ಸ್ಥಳಕ್ಕೆ ಬರುವಂತೆ ಕರೆ ಮಾಡಿದರೂ ಬರಲಿಲ್ಲ. ಆಗ ಸಾರ್ವಜನಿಕರೇ ಕಚೇರಿಗೆ ತೆರಳಿ ಪಟ್ಟು ಹಿಡಿದರು. ಅವರೂ ಸ್ಥಳಕ್ಕೆ ಬಂದಾಗ ಕಾಮಗಾರಿ ಕಳಪೆಯಾಗಿರುವುದನ್ನು ಸಾರ್ವಜಕರೆದುರು ಒಪ್ಪಿಕೊಂಡು, ಈ ಸ್ಥಳದಲ್ಲಿ ಮಾತ್ರ ಹೀಗಾಗಿದೆ, ಉಳಿದ ಎಲ್ಲ ಸ್ಥಳಗಳಲ್ಲಿ ಸರಿಯಾಗಿದೆ ಎಂದರು.  ಡ್ರೈನೇಜ್‌ಗಾಗಿ ಅಗೆದ ರಸ್ತೆ ದುರಸ್ತಿ ಕಾಮಗಾರಿಯನ್ನು ಸೋಮವಾರದಿಂದ ಶುರು ಮಾಡದಿದ್ದರೆ ಒಳಚರಂಡಿ ಬೋರ್ಡ್‌ ಹಾಗೂ ಪ.ಪಂ. ವಿರುದ್ಧ ಪಕ್ಷಾತೀತವಾಗಿ ಸಾರ್ವಜನಿಕರನ್ನೊಳಗೊಂಡು ಉಗ್ರ ಹೋರಾಟ ಮಾಡುವುದಾಗಿ ವಿನೋದ ನಾಯ್ಕ ಎಚ್ಚರಿಸಿದ್ದಾರೆ.