ಕಾರವಾರ: ರೈಲ್ವೆ ಇಲಾಖೆಯ ‘ಬಿ’ ದರ್ಜೆ ಹುದ್ದೆಯ ನೌಕರ ಎಂದು ಹೇಳಿಕೊಂಡು, ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದ ಆರೋಪಿ ವಿಜಯ್ ಗಜನೀಕರ್ ಎಂಬುವ ಯುವಕನನ್ನು ಸೋಮವಾರ ವಂಚನೆಗೊಳಗಾದವರೇ ಪೊಲೀಸರಿಗೆ ತಂದು ಒಪ್ಪಿಸಿದ್ದಾರೆ.

ಮೂಲತ ನಗರದ ಸದಾಶಿವಗಡದವನಾಗಿರುವ ನಿವಾಸಿ ವಿಜಯ್, ಕೋಲ್ಕತ್ತಾದಲ್ಲಿ ವಾಸ ಮಾಡುತ್ತಿದ್ದಾನೆ. ಆದರೆ ಸೋಮವಾರ ಮನೆಗೆಂದು ಇಲ್ಲಿಗೆ ಆಗಮಿಸಿದ್ದ ಆತನನ್ನು, ವಂಚನೆಗೊಳಗಾದ ಚಂದ್ರಕಾಂತ್ ವೈಂಗಣಕರ್ ಹಣ ಮರಳಿಸುವಂತೆ ಪ್ರಶ್ನಿಸಿದ್ದಾರೆ. ಆದರೆ ಅವರಿಗೆ ಕಲ್ಲಿನಿಂದ ಹೊಡೆಯಲು ಯತ್ನಿಸಿದಾಗ ಇತರರ ಸಹಕಾರದಲ್ಲಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.

ನಡೆದಿದ್ದೇನೆ?: ಈತ ಇನ್ನೋರ್ವ ಮಂಜುನಾಥ್ ಎಂಬುವವನ ಜತೆಗೂಡಿ ಕಾರವಾರ, ಗೋವಾ, ಯಲ್ಲಾಪುರ ಹಾಗೂ ಅಂಕೋಲಾದ ಸುಮಾರು 60 ಮಂದಿಗೆ ಈಸ್ಟರ್ನ್‌ ರೈಲ್ವೆಯಲ್ಲಿ ‘ಸಿ’ ಹಾಗೂ ‘ಡಿ’ ದರ್ಜೆಯ ನೌಕರಿ ಕೊಡಿಸುವುದಾಗಿ ₨ 10 ಕೋಟಿಗೂ ಅಧಿಕ ವಂಚಿಸಿದ್ದಾನೆ.
‘ಕೊಲ್ಕತ್ತಾದಲ್ಲಿ ‘ಬಿ’ ದರ್ಜೆ ಹುದ್ದೆಯ ನೌಕರ ಎಂದು ಒಂದೂವರೆ ವರ್ಷದ ಹಿಂದೆ ನಂಬಿಸಿದ್ದ ವಿಜಯ್, ‘ನಮ್ಮ ಬಾಸ್‌ಗೆ ಮಮತಾ ಬ್ಯಾನರ್ಜಿ ಪರಿಚಯ ಇದೆ’ ಎಂದು ಹೇಳಿಕೊಂಡಿದ್ದ. ಇಲ್ಲಿನ ಸ್ಥಳೀಯರಿಗೆ ಅಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿದ್ದ. ಆದರೆ ‘ಸಿ’ ದರ್ಜೆಯ ಹುದ್ದೆಗೆ ₨ 6 ಲಕ್ಷ, ‘ಡಿ’ ದರ್ಜೆಯ ನೌಕರಿಗೆ ₨ 4.5 ಲಕ್ಷ ರೂ. ಹಣ ನೀಡಬೇಕಾಗುತ್ತದೆ. ‘ಅದರಲ್ಲಿ ಮಮತಾ ಬ್ಯಾನರ್ಜಿ, ಪೊಲೀಸರು, ರೈಲ್ವೆ ಇಲಾಖೆಯವರಿಗೆಲ್ಲ ಲಕ್ಷಗಟ್ಟಲೆ ಕಮಿಷನ್ ಕೊಡಬೇಕಾಗುತ್ತದೆ’ ಎಂದು ಕೂಡ ಹೇಳಿದ್ದ’ ಎಂದು ವಂಚನೆಗೊಳಗಾದ ಚಂದ್ರಕಾಂತ ವೈಂಗಣಕರ್ ತಿಳಿಸಿದರು.

RELATED ARTICLES  ಉದ್ಯೋಗ ಕೊಡಿಸುವುದಾಗಿ ವಂಚನೆ : ಕುಮಟಾದಲ್ಲಿ ಪ್ರಕರಣ ದಾಖಲು

‘ಆತನ ಮಾತನ್ನು ನಂಬಿ, ನೌಕರಿಯ ಆಸೆಗೆ ಹಣ ನೀಡಿದ್ದರು. ಇದು ವಂಚನೆ ಎಂದು ಗೊತ್ತಾಗಬಾರದೆಂದು 60 ಮಂದಿಯಲ್ಲಿ 5– 10 ಮಂದಿಯ ಬ್ಯಾಚ್‌ ಮಾಡಿ, ಒಂದೊಂದೆ ಬ್ಯಾಚ್‌ ಅನ್ನು ಕೋಲ್ಕತ್ತಾಕ್ಕೆ ಕರೆಯಿಸಿಕೊಂಡು ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದ. ಅದರ ವರದಿ (ರಿಪೋರ್ಟ್‌) ಕೂಡ ಈತ ನೀಡಿದ್ದಾನೆ. ಅದರ ನಂತರ ಕೆಲವರಿಗೆ ಒಂದೂವರೆ ತಿಂಗಳು, ಮೂರು ತಿಂಗಳವರೆಗೆ ಅಲ್ಲಿನ ರೈಲ್ವೇ ಕ್ವಾಟ್ರಸ್‌ನಲ್ಲಿ ತರಬೇತಿ ಕೂಡ ಕೊಡಿಸಿದ್ದ. ಈ ವೇಳೆ ಅಲ್ಲಿಗೆ ಬರುವವರ ಬಳಿಯ ಏಟಿಎಂನಿಂದ ನಗದು ರೂಪದಲ್ಲಿಯೇ ಹಣ ಪಡೆದುಕೊಂಡಿದ್ದಾನೆ. ಅದಾದ ಬಳಿಕ ಕೆಲವರಿಗೆ ತರಬೇತಿ ಉತ್ತೀರ್ಣರಾಗಿದ್ದೀರಿ ಎಂದು ನಕಲಿ ಪ್ರಮಾಣಪತ್ರವನ್ನು ಕೂಡ ಕಳುಹಿಸಿದ್ದಾನೆ. ರೈಲ್ವೆ ಇಲಾಖೆಯ ಬಟ್ಟೆ, ಶೂಗಳನ್ನು ಕೂಡ ಒದಗಿಸಿದ್ದಾನೆ’ ಎಂದು ತಿಳಿಸಿದರು. ಎಲ್ಲರ ಮೂಲ ದಾಖಲೆಗಳನ್ನು ಕೂಡ ವಿಜಯ್ ಪಡೆದುಕೊಂಡಿದ್ದಾನೆ. ಇನ್ನು ಹಿಂತಿರುಗಿಸಿಲ್ಲ ಎಂದು ಅವಲತ್ತುಕೊಂಡರು.

RELATED ARTICLES  ನಿರುಪಯುಕ್ತ ವಸ್ತುಗಳಿಂದ ಮನೋಹರ ವಸ್ತುಗಳ ತಯಾರಿ : ಮಕ್ಕಳ ಕ್ರಿಯಾಶೀಲತೆ ಬೆಳೆಸುವ ಕಾರ್ಯ : ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳು.

‘ಆದರೆ ಕೆಲಸ ಮಾತ್ರ ಒಂದೂವರೆ ವರ್ಷ ಕಳೆದರು ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಿದರೆ, ‘ಸ್ವಲ್ಪ ಸಮಯ ಹಿಡಿಯುತ್ತದೆ. ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಅಂತ ನಂಬಿಸುತ್ತಿದ್ದ. ಆದರೆ ಈತ ನೌಕರಿಯಲ್ಲಿದ್ದವನಲ್ಲ. ಆತನದು ವಂಚನೆ ಮಾಡುವುದೇ ಕೆಲಸ ಎಂದು ತಿಳಿದು ಬಂದಿದೆ’ ಎಂದು ಹೇಳಿದರು.