‘ಶಿರಸಿ : ಮೀನುಗಾರ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ನಾವು ಮೀನುಗಾರ ಪಂಗಡದವರಾಗಿದ್ದೇವೆ. ಆದ್ದರಿಂದ ನಮ್ಮ ಎಲ್ಲಾ 39 ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಮೀನುಗಾರ ವಿಭಾಗದ ರಾಜ್ಯಾಧ್ಯಕ್ಷ ಯು.ಆರ್.ಸಭಾಪತಿ ಒತ್ತಾಯಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಾವು ಬುಡಕಟ್ಟು ಜನಾಂಗದವರಾಗಿದ್ದೇವೆ ಅಲ್ಲದೇ ಸುಪ್ರೀಂ ಕೋರ್ಟ ಈಗಾಗಲೇ ಮೊಗೇರ್ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿದೆ. ಅದರ ಅನುಷ್ಠಾನ ಸರಿಯಾಗಿ ಆಗಬೇಕು ಎಂದರು.

ಕೃಷಿ ಸಾಲವನ್ನು ಮನ್ನಾ ಮಾಡಿರುವ ರೀತಿಯಲ್ಲಿಯೇ ಮೀನುಗಾರರ ಸಾಲವನ್ನೂ ಸಹ ರೂ.50 ಸಾವಿರದವರೆಗೆ ಮನ್ನಾ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಂದಿಸಿದ್ದಾರೆ. ಮೀನಗಾರ ಸಮುದಾಯದ ಅಭಿವೃದ್ಧಿ ಪೂರಕ ವಾತಾವರಣವಿರುವ ರಾಷ್ಟ್ರೀಯ ಮೀನುಗಾರಿಕಾ ನೀತಿಯನ್ನು ಕಾರ್ಯರೂಪಕ್ಕೆ ತರಬೇಕು. ಇಲ್ಲಿಯವರೆಗೆ ಅದು ಕೇವಲ ನೀತಿ ನಿರೂಪಣೆ ಮಾತ್ರ ಆಗಿದೆ ಅದು ಜಾರಿಯಾಗಬೇಕು. ಮೀನುಗಾರರ ಸಮಸ್ಯೆ ಬಗೆಹರಿಸಲು ಸಂಸತ್ ಹಾಗೂ ವಿಧಾನ ಸಭೆಗಳಲ್ಲಿ ನಮ್ಮ ಸಮುದಾಯದವರ ಸಂಖ್ಯಾಬಲದ ಅಗತ್ಯವಿದೆ. ಇಂದು ಕೇವಲ ಮೂರು ಶಾಸಕರು ನಮ್ಮವರಿದ್ದಾರೆ. ನಮ್ಮ ಸಮುದಾಯದ ಜನರ ಸಂಖ್ಯೆ ಸುಮಾರು 22 ಲಕ್ಷಗಳಷ್ಟಿದೆ. ಆದ್ದರಿಂದ ರಾಜ್ಯದಿಂದ ಸಂಸತ್ ಕ್ಷೇತ್ರದಲ್ಲಿ ಕನಿಷ್ಠ ಎರಡು ಕ್ಷೇತ್ರಗಳನ್ನಾದರೂ ನೀಡಬೇಕು ಎಂದು ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದರು.

RELATED ARTICLES  ಮೂರೂರಿನಲ್ಲಿ ದೇವರು ಹೆಗಡೆ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ

ಎಲ್ಲಾ ರಾಜ್ಯಗಳಲ್ಲಿಯೂ ಮೀನುಗಾರಿಕಾ ಸಚಿವರಿದ್ದಾರೆ. ಅದರಂತೇ ಕೇಂದ್ರ ಸಚಿವ ಸಂಪುಟದಲ್ಲಿಯೂ ಸಹ ಪ್ರತ್ಯೇಕ ಮೀನುಗಾರಿಕಾ ಸಚಿವರ ಅಗತ್ಯವಿದೆ. ಆಗ ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

RELATED ARTICLES  ಹೊನ್ನಾವರ ಸಮೀಪ ಭೀಕರ ಅಪಘಾತ: ಓರ್ವನ ದುರ್ಮರಣ.

ನಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಯು.ಆರ್.ಸಭಾಪತಿ ಅವರನ್ನು ಸನ್ಮಾನಿಸಲಾಯಿತು. ಮೀನುಗಾರಿಕಾ ಘಟಕದ ಉಪಾಧ್ಯಕ್ಷ ಗೌತಮ್ ಚೌದರಿ, ರಾಮಾ ಮೊಗೇರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸುಣಗಾರ, ಜಿಲ್ಲಾಧ್ಯಕ್ಷ ಗಣಪತಿ ಮೊಗೇರ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ ಹಾಗೂ ಪ್ರಮುಖರಾದ ರಮೇಶ ದುಭಾಶಿ, ಸುಮಾ ಉಗ್ರಾಣಕರ, ಅನಿತಾ ಮಹಪಾರಿ, ಕಿರಣ್, ಮೊಹಿನಿ ಬೈಲೂರು ಇದ್ದರು.