ಬೆಂಗಳೂರು: ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಹಸಿವು ನೀಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಕರ್ನಾಟಕದ ಸರಕಾರದ ಈ ಕಾರ್ಯಕ್ಕೆ ಬಿಬಿಸಿ ನ್ಯೂಸ್ ಬೇಷ್ ಎಂದಿದ್ದು, ತಾಜಾವಾಗಿರುವ, ಬಿಸಿ, ಬಿಸಿ ಆಹಾರವನ್ನು ಜನರು ಅತ್ಯಂತ ಕಡಿಮೆ ದರದಲ್ಲಿ ಕೊಳ್ಳುತ್ತಿದ್ದು, ಈ ಯೋಜನೆ ಹೆಚ್ಚು ಜನಪ್ರಯವಾಗಿದೆ, ಎಂದು ನ್ಯೂಸ್ ಹೇಳಿದೆ.
ತಮಿಳುನಾಡಿನಲ್ಲಿ ಆರಂಭವಾದ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಆಗಸ್ಟ್ 16ರಂದು ಆರಂಭವಾದ ಈ ಕ್ಯಾಂಟೀನ್‌ನಲ್ಲಿ ತಿಂಡಿ, ಊಟ ಖರೀದಿಸಲು ಜನರು ಮುಗಿ ಬೀಳುತ್ತಿದ್ದು, ತೂಕ ಮಾಡಿ ಆಹಾರ ನೀಡಲಾಗುತ್ತದೆ. ದಿನಗೂಲಿ ಕಾರ್ಮಿಕರು, ಚಾಲಕರು, ಭದ್ರತಾ ಸಿಬ್ಬಂದಿ, ಭಿಕ್ಷುಕರು ಸೇರಿ ಬಡವರು ಆಹಾರ ಕೊಳ್ಳುತ್ತಿದ್ದು, ಇಂಥವರ ಹಸಿವು ನೀಗಿಸುವಲ್ಲಿ, ಸರಕಾರ ತೆಗೆದುಕೊಂಡಿರುವ ಕ್ರಮಕ್ಕೆ ಬಿಬಿಸಿ ಶಹಬ್ಬಾಸ್ ಎಂದು ಹೇಳಿದೆ.
ಕೇವಲ ಐದು ರೂ.ಗೆ ತಿಂಡಿ ಸಿಗಲಿದ್ದು, ಈ ಮುಂಚೆ 30 ರೂ. ಖಾಲಿ ಮಾಡುತ್ತಿದ್ದವರು ದಿನಕ್ಕೆ 25 ರೂ. ಉಳಿಸುವಂತಾಗಿದೆ. ಮೂರು ಹೊತ್ತಿನ ಊಟಕ್ಕೆ ಸುಮಾರು 140 ರೂ. ಖಾಲಿ ಮಾಡುತ್ತಿದ್ದವರು ಇದೀಗ ಕೇವಲ 40 ರೂ.ಖಾಲಿ ಮಾಡುತ್ತಿದ್ದು, ದಿನಕ್ಕೇ 100 ರೂ.ನಷ್ಟು ಉಳಿತಾಯ ಮಾಡುತ್ತಿದ್ದಾರೆ. ಇದರಿಂದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬುವುದು ಬಿಬಿಸಿ ಅಭಿಪ್ರಾಯ.