ಶಿರಸಿ: ಪ್ರಸಿದ್ಧ ಪ್ರವಾಸಿ ತಾಣ ಸಹಸ್ರಲಿಂಗದಲ್ಲಿ ಶಾಲ್ಮಲಾ ನದಿಗೆ ಅಡ್ಡಲಾಗಿ ನಿರ್ಮಿಸಿದ ತೂಗುಸೇತುವೆ ನಿರ್ವಹಣೆಯಿಲ್ಲದೇ ದುಃಸ್ಥಿತಿಗೆ ತಲುಪುತ್ತಿದ್ದು, ನಿರ್ವಹಣೆ ಜವಾಬ್ದಾರಿ ಹೊತ್ತ ಲ್ಯಾಂಡ್ ಆರ್ಮಿಯವರು ಕಾಟಾಚಾರಕ್ಕೆ ಬಣ್ಣ ಬಳಿದು ಲಕ್ಷಾಂತರ ರೂಪಾಯಿ ಪೋಲು ಮಾಡುತ್ತಿದ್ದಾರೆ.
ಸಹಸ್ರಲಿಂಗದಲ್ಲಿ ನಾಲ್ಕೈದು ವರ್ಷಗಳ ಹಿಂದೆ ತೂಗು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ಅದರ ನಿರ್ವಹಣೆಯ ಹೆಸರಿನಲ್ಲಿ ಲ್ಯಾಂಡ್ ಆರ್ಮಿಯವರಿಂದ ತುಕ್ಕು ಹಿಡಿದ ಕಬ್ಬಿಣದ ಮೇಲೆಯೇ ಬಣ್ಣ ಬಳಿದು, ಕಾಮಗಾರಿ ಮುಗಿಸುವ ಮೂಲಕ ಸಾರ್ವಜನಿಕರ ಕಣ್ಣುಕಟ್ಟುವ ಕಾರ್ಯ ಮಾಡಿದ್ದಾರೆ.
‘ತೂಗು ಸೇತುವೆಯ ಗ್ರಿಲ್ಸ್‌ಗಳಿಗೆ ಬಣ್ಣ ಬಳಿಯುವ ಉದ್ದೇಶದಿಂದ ನಿರ್ವಹಣಾ ವೆಚ್ಚವಾಗಿ ₹ 4 ಲಕ್ಷ ಮೀಸಲಿಡಲಾಗಿದೆ. ಅದರಂತೆ ನಿರ್ವಹಣೆಯ ಭಾಗವಾಗಿ ತೂಗು ಸೇತುವೆಯ ಕಬ್ಬಿಣದ ಸರಳುಗಳಿಗೆ, ಕೈ ಪಟ್ಟಿಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಆದರೆ ಅಲ್ಲಿಯ ತುಕ್ಕನ್ನು ತೆಗೆಯದೇ ಆ ಕಬ್ಬಿಣದ ಮೇಲೆಯೇ ಬಣ್ಣ ಹಚ್ಚಲಾಗುತ್ತಿದ್ದು, ಇದರಿಂದ ಯಾವುದೇ ಪ್ರಯೋಜನ ಇಲ್ಲ’ ಎಂದು ಸ್ಥಳೀಯರಾದ ಗಣಪತಿ ಜೋಶಿ ದೂರಿದರು.
‘ಈ ಸೇತುವೆ ಮೇಲೆ ಪ್ರತಿನಿತ್ಯ ಸ್ಥಳೀಯರು, ಪ್ರವಾಸಿಗರು ಓಡಾಡು ತ್ತಾರೆ. ಎಲ್ಲರಿಗೂ ಅನುಕೂಲವಾಗುವ ಉದ್ದೇಶದಿಂದ ಸೇತುವೆ ಮಾಡಲಾಗಿದೆ. ಆದರೆ ಈಗ ಅದರ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ನೂರಾರು ವರ್ಷ ಬಾಳಿಕೆ ಬರಬೇಕು ಎನ್ನುವ ಸೇತುವೆಗೆ ಬಣ್ಣ ಬಳಿಯುವುದರಲ್ಲೇ ಕಳಪೆತನ ತೋರಲಾಗುತ್ತಿದೆ. ಒಟ್ಟಾರೆಯಾಗಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಲಿ ಎಂದು ನಿರ್ಮಿಸಿರುವ ತೂಗು ಸೇತುವೆ ಲ್ಯಾಂಡ್ ಆರ್ಮಿಯ ಬೇಜವಾಬ್ದಾರಿ ಹಾಗೂ ಕಳಪೆ ಕಾಮಗಾರಿಯಿಂದ ಹಾಳಾಗುತ್ತಿದೆ. ಇದೇ ರೀತಿ ಬಣ್ಣ ಹಚ್ಚಿ ದರೆ ಕೇವಲ ಐದಾರು ವರ್ಷವಷ್ಟೇ ಈ ಸೇತುವೆ ಸರಿಯಾಗಿರುತ್ತದೆ. ಕಾಟಾ ಚಾರಕ್ಕೆ ಕೆಲಸ ಆಗದೇ ಉತ್ತಮ ನಿರ್ವ ಹಣೆ ಆಗಬೇಕು’ ಎನ್ನುತ್ತಾರೆ ಅವರು.
ಗ್ರಿಲ್ ನಿರ್ಮಾಣದಲ್ಲಿಯೂ ಕಳಪೆ: ‘ಸಹಸ್ರಲಿಂಗದ ಸಂಪೂರ್ಣ ನಿರ್ವಹಣೆಯ ಕಾಮಗಾರಿಯ ನಿರ್ವಹಣೆ ಹೊತ್ತಿರುವ ಲ್ಯಾಂಡ್ ಆರ್ಮಿಯವರು ಅಲ್ಲಿಯ ಪ್ರಪಾತದ ಅಂಚುಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಗ್ರಿಲ್ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈಗಾಗಲೇ ನಿರ್ಮಿಸಿದ ಗ್ರಿಲ್‌ಗಳನ್ನು ಮುಟ್ಟಿದರೆ ಬೀಳುತ್ತದೆ ಎನ್ನುವ ಪರಿಸ್ಥಿತಿ ಇದೆ. ಅಲ್ಲದೇ ಫೌಂಡೇಷನ್ ಸಹ ಸರಿಯಾಗಿ ಹಾಕಿಲ್ಲ. ಹೀಗೆ ಸಹಸ್ರಲಿಂಗದ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಖರ್ಚು ಮಾಡಲಾಗುತ್ತಿದೆಯೇ ವಿನಾ ಅಭಿವೃದ್ಧಿ ಆಗುತ್ತಿಲ್ಲ’ ಎಂದು ದೂರಿದರು.