ಕುಮಟಾ: ಪುರಸಭಾ ಕುಮಟಾ ಸಹಯೋಗದಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿವಿಧ ಭಾಷಾ ಸಂಘಗಳ ಸಂಯುಕ್ತ ಆಶ್ತಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಅಂಗವಾಗಿ ಬಹುಭಾಷಾ ಕಥಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅತಿಥಿಗಳಾಗಿ ಆಗಮಿಸಿದ ಪುರಸಭಾ ವ್ಯವಸ್ಥಾಪಕ ಎನ್.ಎಂ.ಮೇಸ್ತ್ ರಾಷ್ಟ್ರೀಯ ಭಾವೈಕ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿ, ಸಪ್ತಾಹದ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭಾ ಕಾರ್ಯಾಲಯದ ಸಿಬ್ಬಂದಿ ಮೀನಾಕ್ಷಿ ಆಚಾರಿ ಪ್ರಸ್ತುತ ದೇಶ ಎದುರಿಸುತ್ತಿರುವ ಭಾಷಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪರಿಸ್ಥಿಯನ್ನು ವಿಶ್ಲೇಷಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಸ್ವಭಾಷಾ ಪ್ರೇಮದ ಜೊತೆಜೊತೆಗೆ ಅನ್ಯ ಭಾಷೆಯನ್ನು ಆದರಿಸಬೇಕಲ್ಲದೇ, ನವಭಾರತ ನಿರ್ಮಾಣಕ್ಕೆ ಮೊದಲಮೆಟ್ಟಿಲಾಗಿ ಭಾಷಾ ಸೌಹಾರ್ದತೆ ಬಲಗೊಳ್ಳಲು ಈಗಿನ ಪೀಳಿಗೆ ಅಣಿಗೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಾದ ರಕ್ಷಿತಾ ಪಟಗಾರ, ಶ್ರೀಲಕ್ಷ್ಮೀ ಭಟ್ಟ, ಯೋಗೀಶ್ ಗುನಗಾ, ದರ್ಶನ ಪುರಾಣಿಕ, ಫಾಜಲ್ ಖಾನ್, ವಿಶ್ವಾಸ ಪೈ ಕ್ರಮವಾಗಿ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕøತ, ಉರ್ದು ಮತ್ತು ಕೊಂಕಣಿ ಭಾಷೆಗಳಿಂದ ಕಥಾ ವಾಚನ ಸಾದರ ಪಡಿಸಿ ಮೆಚ್ಚುಗೆ ಗಳಿಸಿದರು. ಶಿಕ್ಷಕ ಸುರೇಶ್ ಪೈ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಕಿರಣ ಪ್ರಭು ವಂದಿಸಿದರು.