ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಬೇಕೇ ಹೊರತು ಒತ್ತಡ ಹಾಕಿ ಓದಿಸಬಾರದು.ತಾನು ಮುಂದೆ ಏನಾಗಬೇಕು ಎನ್ನುವ ಆಯ್ಕೆಯನ್ನು ಸ್ವತಃ ಮಕ್ಕಳು ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅವರು ಶುಕ್ರವಾರ ಮುರೂರಿನ ಪ್ರಗತಿ ವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ನಿರೀಕ್ಷೆ ನಿರಾಸೆಯಾದಾಗ ದುಃಖವಾಗುತ್ತದೆ. ಆದ್ದರಿಂದ ಅತಿಯಾದ ನಿರೀಕ್ಷೆ ಇರಬಾರದು.ನಿರೀಕ್ಷೆ ಮೀರಿದ ಯಶಸ್ಸು ಸಂತಸ ತರುತ್ತದೆ. ಶಾಲೆ ಎನ್ನುವದು ಆನಂದಧಾಮ ಮತ್ತು ಜ್ಞಾನಧಾಮವಾಗಿರಬೇಕು.ಕಲಿಕೆ ಎನ್ನುವದು ಸಂತಸದಾಯಕವಾಗಿರಬೇಕು.ಜ್ಞಾನ ಮತ್ತು ಆನಂದ ಜೊತೆಯಲ್ಲಿದ್ದರೆ ಗುಣಾತ್ಮಕ ಶಿಕ್ಷಣ ದೊರೆಯಲು ಸಾಧ್ಯ. ಕಲಿಕೆಗೆ ಬೇಕಾಗಿದ್ದು ಗ್ರಹಣ,ಧಾರಣ ಮತ್ತು ಸ್ಮರಣ.ಯಾವ ವಿದ್ಯಾರ್ಥಿ ಇದನ್ನು ಮೈಗೂಡಿಸಿಕೊಳ್ಳುತ್ತಾನೋ ಆತ ಯಶಸ್ವಿಯಾಗುತ್ತಾನೆ. ಆದ್ದರಿಂದ ಶಿಕ್ಷಕರೂ ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸಬೇಕು ಎಂದರು.
ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಸನ್ಮಾನಿಸಿದ ಅವರು ಒಬ್ಬ ವಿದ್ಯಾರ್ಥಿಯ ಸಾಧನೆ ಹಲವರಿಗೆ ಗೌರವ ತಂದುಕೊಟ್ಟಿದೆ.ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಅವರೆಲ್ಲರ ಪಾಲಿರುವದರಿಂದ ಗೌರವ ಪಡೆಯುತ್ತಾರೆ ಎಂದು ನುಡಿದರು.
ಪ್ರಗತಿ ವಿದ್ಯಾಲಯ ಈ ಭಾಗದಲ್ಲಿ ಉತ್ತಮ ಸಾದನೆ ಮಾಡುತ್ತಿದೆ.ಇಲ್ಲಿಯ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ.ಉತ್ತಮ ಮೂಲಭೂತ ಸೌಕರ್ಯ,ಸಿಬ್ಬಂದಿಗಳು ಮತ್ತು ಶ್ರೀಗಳ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ.ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶಾಸಕಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ ಹೇಳಿದರು.
ಸಾಧನೆಯ ವಿಷ್ಲೇಷಣೆ ಮಾಡಿದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಮ್ ಜಿ ಭಟ್ಟ ವಿದ್ಯಾರ್ಥಿಗಳು ಪ್ರತಿಶತ 100 ಅಂಕಗಳ ಗುರಿ ಇಟ್ಟುಕೊಂಡರೆ ಹೆಚ್ಚಿನ ಸಾಧನೆ ಸಾಧ್ಯವಾಗುತ್ತದೆ.ನಮ್ಮ ವಿದ್ಯಾಲಯದಲ್ಲಿ ಸಿಬ್ಬಂದಿವರ್ಗ ವಿಶೇಷ ಆಸಕ್ತಿಯಿಂದ ಕಲಿಸುವಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು. ರಾಮಚಂದ್ರಾಪು ಮಠದ ವಿದ್ಯಾ ವಿಭಾಗದ ಶ್ರೀ ಕಾರ್ಯದರ್ಶಿ ಪ್ರಮೋದ್ ಪಂಡಿತ ಸ್ವಾಗತಿಸಿದರು. ಜಿಪಂ ಸದಸ್ಯ ಪ್ರದೀಪ ನಾಯಕ,ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ರೇಮಾ ನಾಯರ್, ಆರ್ ಜಿ ಭಟ್ಟ, ಶಾಲಾ ಆಡಳಿತ ಮಂಡಳಿಯ ಸದಸ್ಯರುಗಳು,ಮುರೂರು ಕಲ್ಲಬ್ಬೆ ವಲಯ ಮತ್ತು ಕುಮಟಾ ಮಂಡಲದ ಪದಾಧಿಕಾರಿಗಳು ಹಾಜರಿದ್ದರು.
624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಈಶ್ವರ ಜೋಶಿ ಅವರನ್ನು ವಿಶೇಷವಾಗಿ ಆಶೀರ್ವದಿಸಿ ಸನ್ಮಾನಿಸಲಾಯಿತು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಶ್ರೀಪಾದ ಭಟ್ಟ ವಂದಿಸಿದರು.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಿವಿಎಸ್‌ಕೆ ವಿದ್ಯಾರ್ಥಿಗಳು