ಕುಮಟಾ: ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಾಚರಿಸುತ್ತಿರುವ ವಾಟ್ಸ್‍ಅಪ್ ಮತ್ತು ಫೆಸ್‍ಬುಕ್ ನ್ಯೂಸ್ ಗ್ರುಪ್‍ಗಳು ತಮ್ಮ ಪರಿಮಿತಿ ಹಾಗೂ ಕಾನೂನನ್ನು ಮೀರಿ ಮನಸ್ಸಿಗೆ ಬಂದಂತೆ ಸುಳ್ಳು ಹಾಗೂ ಮಾನಹಾನಿಕಾರಕ ಸಂದೇಶಗಳನ್ನು ಹರಡುವ ಮೂಲಕ ಪತ್ರಕರ್ತರ ಕರ್ತವ್ಯಕ್ಕೆ ತೊಂದರೆ ಉಂಟು ಮಾಡುತ್ತಿರುವುದಲ್ಲದೆ, ಸಾಮಾಜಿಕ ಸ್ವಾಸ್ತ್ಯ ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ.
ಕೇರಳದಲ್ಲಿ ಕಾಣಿಸಿಕೊಂಡ ಹುಲಿ ಚಿತ್ರವನ್ನು ನ್ಯೂಸ್ ಪೋರ್ಟ್‍ನಲ್ಲಿ ಪೇಸ್ಟ್ ಮಾಡಿ, ಮಿರ್ಜಾನ ನಾಗೂರಿನಲ್ಲಿ ಈ ಹುಲಿ ಕಂಡುಬಂದಿದೆ ಎಂದು ಆ ಭಾಗದ ಜನರಲ್ಲಿ ಹುಲಿಯ ಬಗ್ಗೆ ಆತಂಕ ಹುಟ್ಟಿಸುವುದು. ಅಲ್ಲದೆ ಪತ್ರಿಕೆ ಮತ್ತು ನ್ಯೂಸ್ ಚಾನಲ್‍ಗಳ ವಿರುದ್ಧ ಇಲ್ಲಸಲ್ಲದ ಅವಹೇಳನಕಾರಿಯಾದ ಸಂದೇಶವನ್ನು ರವಾನಿಸುವುದು.
ಪತ್ರಕರ್ತರ ವಿರುದ್ಧ ಕೂಡ ನಿರಾಧಾರವಾದ ಭ್ರಷ್ಟಾಚಾರದ ಆರೋಪಗಳನ್ನು ಕೂಡ ನಮ್ಮ ಉತ್ತರಕನ್ನಡ, ನಮ್ಮ ಕುಮಟಾ ನ್ಯೂಸ್ ಇತರೆ ವಾಟ್ಸ್‍ಅಪ್ ನ್ಯೂಸ್ ಗ್ರುಪ್‍ಗಳಲ್ಲಿ ಹರಿಬಿಡಲಾಗಿದೆ. ನಿರ್ಧಿಷ್ಟ ನ್ಯೂಸ್ ಚಾನೆಲ್‍ಗಳ ಹೆಸರಿನಲ್ಲಿ ಕೆಲ ರಾಜಕೀಯ ಪಕ್ಷಗಳ ಮುಂಖಡರಿಗೆ ಟಿಕೆಟ್ ಖಚಿತ, ಅವರ ಆಯ್ಕೆಯೂ ಖಚಿತ ಎನ್ನುವ ಸುದ್ದಿಯನ್ನು ಹರಿಬಿಟ್ಟು, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದು “ಕಾಸಿಗಾಗಿ ಸುದ್ದಿ” ಎಂದೆನಿಸುತ್ತಿದೆ.
ಇದರ ವಿರುದ್ಧ ಚುನಾವಣಾ ಆಯೋಗ ಗಮನಹರಿಸಬೇಕು. ಹಾಗಾಗಿ ಈ ಗ್ರುಪ್‍ನ ಎಡ್ಮಿನರ್‍ಗಳ ವಿರುದ್ಧ ಸೈಬರ್ ಕ್ರೈಂ ಆ್ಯಕ್ಟ್‍ನಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆಗೊಳ್ಪಡಿಸಬೇಕು. ಅಲ್ಲದೆ ಈ ಗ್ರುಪ್‍ಗಳನ್ನು ಬ್ಲಾಕ್ ಮಾಡಿಸಿ, ಸಾಮಾಜಿಕ ಸ್ವಾಸ್ತ್ಯ ಕಾಪಾಡಲು ಅಗತ್ಯ ಕ್ರಮ ಜರುಗಿಸಬೇಕು. ಎಲ್ಲದಕ್ಕೂ ಮಿಗಿಲಾಗಿ ಈ ಸಾಮಾಜಿಕ ಜಾಲತಾಣಗಳ ಕಾನೂನು ಮಾನ್ಯತೆ, ಸಂದೇಶ ರವಾನಿಸುವ ಸಂಬಂಧದ ಪರಿಮಿತಿ, ಸೇರಿದಂತೆ ಮಾನಹಾನಿಕಾರಕ ಸಂದೇಶಗಳನ್ನು ಪ್ರಸಾರ ಮಾಡುವವರ ವಿರುದ್ಧ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತಾದ ಅರಿವನ್ನು ಯುವ ಜನತೆಗೆ ಮೂಡಿಸಲು ಪೊಲೀಸ್ ಇಲಾಖೆಯಿಂದ ಪ್ರಕಟಣೆ ಹೊರಡಿಸುವ ಕಾರ್ಯವಾಗಬೇಕು ಎಂದು ಒತ್ತಾಯಿಸಿ ಕುಮಟಾದಲ್ಲಿ ಸಹಾಯಕ ಆಯುಕ್ತರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅನ್ಸಾರ್ ಶೇಖ್, ಕಾರ್ಯದರ್ಶಿ ಚರಣ ನಾಯ್ಕ, ಪ್ರಮುಖರಾದ ಸುಬ್ರಾಯ ಭಟ್ಟ, ಸದಾಶಿವ ಹೆಗಡೆ, ಕೃಷ್ಣ ಅಬ್ಬೆಮನೆ, ಎಂ ಎನ್ ಭಟ್ಟ ಇನ್ನಿತರರು ಹಾಜರಿದ್ದರು.