ಕಾರವಾರ: ಇಲ್ಲಿನ ಗೀತಾಂಜಲಿ ಚಿತ್ರಮಂದಿರ ಸಮೀಪದ ಮಾರಿಗುಡಿ ಬದಿಯಲ್ಲಿ ಕಸದ ರಾಶಿ ಬಿದ್ದಿದೆ. ಈ ಕಸ ಎಲ್ಲಿಂದ ಬಂತು?, ಇದನ್ನು ಏಕೆ ತೆರವುಗೊಳಿಸಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ.

‘ಶಿರಸಿಯಿಂದ ಮಾರಿದೇವರ ಜತೆ ಹೊರಟ ಈ ಕಸ ಗ್ರಾಮದಿಂದ ಗ್ರಾಮಕ್ಕೆ ಸ್ಥಳಾಂತರವಾಗಿ ಇದೀಗ ನಗರದ ಮಾರಿಗುಡಿ ತಲುಪಿದೆ. ಇದು ಮಾರಿದೇವತೆ ಎಂಬ ನಂಬಿಕೆ ಭಕ್ತರಲ್ಲಿದೆ. ಇದು ಒಂದು ವಾರ ಇಲ್ಲಿಯೇ ಇರುತ್ತದೆ. ಅನಂತರ ವಾಹನದಲ್ಲಿ ಹಾಕಿಕೊಂಡು ನಂದನ ಗದ್ದಾದ ನಾಗದೇವ ದೇವಸ್ಥಾನದ ಬಳಿಗೆ ಸ್ಥಳಾಂತರಿಸುತ್ತೇವೆ. ನಂತರ ಅದು ಸುಂಕೇರಿ, ಕಿನ್ನರ ಹೀಗೇ ವಿವಿಧ ಗ್ರಾಮಗಳನ್ನು ದಾಟಿ ಅಂತಿಮವಾಗಿ ಜೊಯಿಡಾ ತಲುಪುತ್ತದೆ’ ಎನ್ನುತ್ತಾರೆ ಬಾಡ ಮಹಾದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸಿಬ್ಬಂದಿ ಪ್ರಕಾಶ ನಾಯ್ಕ.

ರಾಶಿಯಲ್ಲಿ ಏನೇನಿದೆ?: ಪ್ಲಾಸ್ಟಿಕ್‌ ಖುರ್ಚಿ ಬುಟ್ಟಿಗಳು, ತೊಟ್ಟಿಲು ಹೀಗೆ ಮನೆಯೊಳಗಿನ ಹರಕು ಮುರಕು ವಸ್ತುಗಳು ಈ ಕಸದ ರಾಶಿಯಲ್ಲಿದೆ. ಇದು ರಸ್ತೆಬದಿಯ ಫುಟ್‌ಪಾತ್‌ ಅನ್ನು ಸಂಪೂರ್ಣ ಅತಿಕ್ರಮಿಸಿದೆ. ಅಲ್ಲದೇ ಇದು ಅನೈರ್ಮಲ್ಯ ಉಂಟು ಮಾಡಿದೆ ಎಂಬುದು ಪ್ರಜ್ಞಾವಂತ ನಾಗರಿಕರ ನುಡಿಯಾಗಿದೆ.

RELATED ARTICLES  ಉಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ  : 7 ಜನರ ದುರ್ಮರಣ : ಮುಂದುವರೆದ ಶೆಲ್ ದಾಳಿ?

‘ಮಾರಿಗುಡಿ ದೇವರಿಗೆ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿದ ಉಪ್ಪಿನ ಪೊಟ್ಟಣಗಳ ರಾಶಿ ಸಮೀಪದ ಟ್ರಾನ್ಸ್‌ಫಾರ್ಮರ್‌ ಕಂಬವನ್ನು ಸುತ್ತುವರಿದಿದೆ. ಉಪ್ಪಿನ ಅಂಶದಿಂದ ಕಂಬದೊಳಗಿನ ಕಬ್ಬಿಣದ ರಾಡು ತುಕ್ಕು ಹಿಡಿಯುವ ಸಾಧ್ಯತೆ ಇದ್ದು, ಅನಾಹುತಕ್ಕೆ ದಾರಿ ಮಾರಿಕೊಡುವ ಸಂಭವ ಹೆಚ್ಚಾಗಿದೆ’ ಎನ್ನುತ್ತಾರೆ ಸ್ಥಳೀಯ ರಾಜೇಶ್‌ ನಾಯ್ಕ.

‘ಇದರ ಸಮೀಪದಲ್ಲೇ ಹಿಂದೂ ಹೈಸ್ಕೂಲ್‌ ಹಾಗೂ ಬಾಲಮಂದಿರ ಶಾಲೆಗಳಿದ್ದು, ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಕಾಲ್ನಡಿಗೆ ಹಾಗೂ ಸೈಕಲ್‌ನಲ್ಲಿ ಸಾಗುತ್ತಾರೆ. ಅಲ್ಲದೇ ಈ ರಸ್ತೆಯಲ್ಲಿ ವಾಹನ ದಟ್ಟಣೆ ಕೂಡ ಹೆಚ್ಚಿರುತ್ತದೆ. ಕಂಬ ತುಕ್ಕು ಹಿಡಿದು ಟ್ರಾನ್ಸ್‌ಫಾರ್ಮರ್‌ ರಸ್ತೆಗುರುಳಿದರೆ ಅವಘಡ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಕಸದ ರಾಶಿ ಜತೆ ಉಪ್ಪಿನ ಮೂಟೆಯನ್ನು ತೆರವುಗೊಳಿಸಬೇಕು’ ಎನ್ನುತ್ತಾರೆ ಅವರು.

RELATED ARTICLES  ಗೋಕರ್ಣದಲ್ಲಿ ಸಂಪನ್ನವಾದ 'ದಧಿ ಶಿಕ್ಯೋತ್ಸವ'

‘ಮಾರಿಗುಡಿಗೆ ಬಂದಿರುವ ಕಸವನ್ನು ವಿಲೇವಾರಿ ಮಾಡಲು ಭಕ್ತರು ಬಿಡುವುದಿಲ್ಲ. ಉಪ್ಪಿನ ಪೊಟ್ಟಣಗಳನ್ನು ಕಾಳಿ ಸಂಗಮದಲ್ಲಿ ಭಕ್ತರೇ ವಿಸರ್ಜಿಸಬೇಕು ಎಂದು ದೇವಸ್ಥಾನ ಸಮಿತಿಯವರು ಗುಡಿಯ ಬಳಿ ಸೂಚನಾ ಫಲಕ ಹಾಕಿದ್ದಾರೆ. ಆದರೂ ಭಕ್ತರು ಉಪ್ಪನ್ನು ಇಲ್ಲಿಯೇ ಹಾಕುತ್ತಿದ್ದಾರೆ’ ಎಂದು ನಗರಸಭೆಯ ಎಇಇ ಕೆ.ಎಂ.ಮೋಹನರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅನೇಕ ವರ್ಷಗಳಿಂದ ರಸ್ತೆಬದಿಯಲ್ಲಿ ಸಣ್ಣ ಮಾರಿಗುಡಿ ಇದೆ. ಭಕ್ತರು ನಿತ್ಯ ಈ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಚರ್ಮವ್ಯಾದಿ ಹಾಗೂ ಮೈಯಲ್ಲಿ ನವೆ ಕಾಣಿಸಿಕೊಂಡಾಗ ಈ ದೇವರಲ್ಲಿ ಬೇಡಿಕೊಂಡರೆ ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಅನೇಕ ಭಕ್ತರದ್ದು. ಈ ದೇವಿಗೆ ಹರಕೆ ರೂಪದಲ್ಲಿ ಭಕ್ತರು ಹರಳು ಉಪ್ಪಿನ ಪೊಟ್ಟಣವನ್ನು ಸಲ್ಲಿಸುತ್ತಾರೆ. ಇದರೊಂದಿಗೆ ಸೀರೆ, ಬಳೆ, ಹೂವು ಹಣ್ಣನ್ನೂ ಸಮರ್ಪಿಸುತ್ತಾರೆ.