ಕಾರವಾರ: ಸಾಲಮನ್ನಾ ಮಾಡುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಗಮನಿಸಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಸಚಿವ ಆರ್.ವಿ ದೇಶಪಾಂಡೆ ಒತ್ತಾಯಿಸಿದ್ದಾರೆ.
ರೈತರು ಬರಗಾಲ, ಪ್ರವಾಹಗಳಂತಹ ನೈಸರ್ಗಿಕ ಪ್ರಕೋಪಗಳಿಂದಾಗಿ ಕಂಗೆಟ್ಟಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಬೆಳೆಗಳಿಗೆ ಸೂಕ್ತ ರೀತಿಯ ಬೆಲೆ ಸಿಗದೇ ಪರದಾಡುತ್ತಿದ್ದಾರೆ. ಇದು ರಾಷ್ಟ್ರದ ಕೃಷಿ ಕ್ಷೇತ್ರ ಹಾಗೂ ಕೃಷಿ ಆಧಾರಿತ ಕೈಗಾರಿಕೋದ್ಯಮಗಳ ಮೇಲೆ ಮಾರಕ ಪರಿಣಾಮ ಉಂಟುಮಾಡಲಿದೆ.
ಈ ಹಿಂದೆ ಅಧಿಕಾರದಲ್ಲಿದ್ದ ಯು.ಪಿ.ಎ ಸರ್ಕಾರ ರೈತರ 72 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿತ್ತು. ಇದೇ ಮಾದರಿಯಲ್ಲಿ ಪ್ರಸ್ತುತ ಕೇಂದ್ರ ಸರ್ಕಾರವು ತುರ್ತು ಕ್ರಮ ಕೈಗೊಂಡು ಸಾಲಮನ್ನಾಕ್ಕೆ ಮುಂದಾಗಬೇಕಿದೆ ಎಂದರು.
ಕೃಷಿ ಆಧಾರಿತ ಆಹಾರೋದ್ಯಮಗಳನ್ನು ಮತ್ತು ಸಂಸ್ಕರಣಾಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಲು ಕೇಂದ್ರ ಮುಂದಾಗಬೇಕು. ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಮುಕ್ತಗೊಳಿಸಲು ಹಾಗೂ ಅವರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಸಿಗುವುದಕ್ಕೆ ಸೂಕ್ತ ಮಾರುಕಟ್ಟೆ ಜಾಲ ಕಲ್ಪಿಸುವುದಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.