ಕುಮಟಾ: ಹನೇಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಕಡಿಮೆ ಗ್ರಾಮದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 14 ಹಿಂದುಳಿದ ಬಡ ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲದ ಕಿಟ್ ಗಳೊಂದಿಗೆ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ನ ವತಿಯಿಂದ ಉಚಿತವಾಗಿ ಲೈಟರಗಳನ್ನು ಸಹ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಮಹಿಳೆಯರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಬಿಪಿಎಲ್ ಕಾರ್ಡ ಹೊಂದಿದ, ಗ್ಯಾಸ್ ಸಂಪರ್ಕವನ್ನು ಹೊಂದಿರದ ಬಡ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ ಕಿಟ್ ಗಳನ್ನು ಒದಗಿಸಲಾಗುವುದು. ಈ ಸೌಲಭ್ಯ ಬಡವರ ಮನೆ ಮನೆಗೆ ತಲುಪಬೇಕು. ಬಡವರು ತಮ್ಮ ಕೂಲಿ ಕೆಲಸ ಬಿಟ್ಟು ಹಣ, ಸಮಯ ವ್ಯಯಿಸದೇ ಸುಲಭವಾಗಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ತಮ್ಮ ಟ್ರಸ್ಟ್ ನ ವತಿಯಿಂದ ನಿಃಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಯಾರಿಗಾದರೂ ಈ ಯೋಜನೆಯಡಿ ಗ್ಯಾಸ ಕಿಟ್ ಪಡೆಯಲು ಅನಾನುಕೂಲತೆ ಅಥವಾ ತೊಂದರೆ ಉಂಟಾದಲ್ಲಿ ತಮ್ಮನ್ನು ಸಂಪರ್ಕಿಸಿದರೆ ತಾವು ಖಂಡಿತವಾಗಿ ಅರ್ಹ ಫಲಾನುಭವಿಗಳಿಗೆ ಗ್ಯಾಸ ಸಂಪರ್ಕ ಪಡೆದುಕೊಳ್ಳುವಲ್ಲಿ ಸಹಕರಿಸುತ್ತೇನೆ ಎಂದರು.
ಅಲ್ಲದೇ ಈ ಭಾಗದಲ್ಲಿನ ರಸ್ತೆ, ಕುಡಿಯುವ ನೀರುಹಾಗೂ ಇನ್ನಿತರೇ ಮೂಲಭೂತ ಸೌಕರ್ಯಗಳಿಲ್ಲದೇ ಇರುವುದರಿಂದ ಈ ಭಾಗದ ಜನರು ಅನುಭವಿಸುತ್ತಿರುವ ಅನಾನುಕೂಲತೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತ ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಮ್ಮೊಂದಿಗೆ ಮುಂಚೂಣಿಯಲ್ಲಿದ್ದು ಹೋರಾಡಲು ಸಿದ್ಧನಿದ್ದು ಇದಕ್ಕೆ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರದಿಂದ ಬರುವ ಎಲ್ಲಾ ಯೋಜನೆಗನ್ನು ಬಡವರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ಇತ್ತರು.
ಬಿಜೆಪಿಯ ಗೋಕರ್ಣ ಶಕ್ತಿಕೇಂದ್ರದ ಪ್ರಭಾರಿಯಾಗಿರುವ ಜಿ. ಎಸ್. ಗುನಗ ಅವರು ಮಾತನಾಡಿ ನಾಗರಾಜ ನಾಯಕ ತೊರ್ಕೆಯವರು ತಮ್ಮ ಟ್ರಸ್ಟ್ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಉಜ್ವಲ ಯೋಜನೆಯಡಿ ಹಲವಾರು ಫಲಾನುಭವಿಗಳಿಗೆ ಸುಲಭವಾಗಿ, ಉಚಿತವಾಗಿ ಗ್ಯಾಸ ಸಂಪರ್ಕ ಒದಗಿಸುತ್ತಿರುವುದಲ್ಲದೇ ತಮ್ಮ ಟ್ರಸ್ಟಿನಿಂದ ಉಚಿತವಾಗಿ ಲೈಟರಗಳನ್ನು ಸಹ ನೀಡುತ್ತಿರುವರು. ನಿವೃತ್ತಿಯ ಬಳಿಕವೂ ಇವರು ವಿರಮಿಸದೇ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅವರಿಂದ ತಾವೂ ಕೂಡಾ ಪ್ರಭಾವಿತರಾಗಿರುವುದಾಗಿ ನುಡಿದು ನಾಗರಾಜ ನಾಯಕ ತೊರ್ಕೆಯವರನ್ನು ಅಭಿನಂದಿಸಿದರು. ಈ ಯೋಜನೆಯ ಸಂಪೂರ್ಣ ಅನುಕೂಲತೆಯನ್ನು ಪಡೆದುಕೊಳ್ಳುವಂತೆ ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳಾದ ಬೀರಮ್ಮ ತಿಮ್ಮಪ್ಪ ಗೌಡ, ಶಾರದಾ ನಾಗಪ್ಪ ಗೌಡ, ಗುಲಾಬಿ ತುಕ್ಕು ಗೌಡ, ತುಳಸಿ ದೇವು ಗೌಡ, ಗುಲಾಬಿ ನಾರಾಯಣ ಗೌಡ, ನಾಗಮ್ಮ ಮಾದೇವಿ ಗೌಡ, ದೇವಕಿ ತುಳಸು ಗೌಡ, ಕುಸ್ಲೆ ದುರ್ಗು ಗೌಡ, ತಿಮ್ಮಕ್ಕ ಆನಂದು ಗೌಡ, ಬೀರಮ್ಮ ಪೊಕ್ಕ ಗೌಡ, ಸಾವಿತ್ರಿ ಮಾಣೇಶ್ವರ ಗೌಡ, ಸುಮಿತ್ರಾ ವಿನಾಯಕ ಗೌಡ, ರೇವತಿ ಸಣ್ಣಕೂಸ ಗೌಡ, ಸುನೀತಾ ಕುಸ್ಲು ಗೌಡ ಇವರುಗಳು ಉಚಿತ ಗ್ಯಾಸ ಕಿಟ್ ಗಳನ್ನು ಪಡೆದು ಸಂತಸಪಟ್ಟರು.
ಕಾರ್ಯಕ್ರಮದಲ್ಲಿ ಶಿವಾನಂದ ಗೌಡ ಸ್ವಾಗತಿಸಿದರು. ಶೀಲಾ ಮೆಸ್ತ ನಿರೂಪಿಸಿದರು. ಈ ಸಂದರ್ಭದಲ್ಲಿ ಊರಗೌಡರಾದ ಬೀರಪ್ಪ ಬೀರ ಗೌಡ, ಶಿವಾನಂದ ಶೆಟ್ಟಿ, ಗಣಪತಿ ಗೌಡ, ಹೂವಾ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.