ಕುಮಟಾ: ಮಹಿಳೆಯರು ಸಹಕಾರಿ ಸಂಘಗಳಲ್ಲಿ ನೀಡುವ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಮಾಜಿ ಶಾಸಕ ದಿನಕರ ಶೆಟ್ಟಿ ಹೇಳಿದರು.

ಅವರು ಬುಧವಾರ ಮಂಗಳೂರು ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಕುಮಟಾ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಉತ್ತರಕನ್ನಡದ ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳು ಒಂದಾಗುವುದರ ಮೂಲಕ ಉತ್ತರಕನ್ನಡವನ್ನು ಅಭಿವೃದ್ಧಿಪಡಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಜನ ಬಹಳ ಬುದ್ಧಿವಂತರು. ರಾಷ್ಟ್ರೀಯ ಬ್ಯಾಂಕುಗಳ ತವರು ದಕ್ಷಿಣಕನ್ನಡ ಜಿಲ್ಲೆ. ವಿವಿದೋದ್ದೇಶ ಸಹಕಾರಿ ಸಂಘಗಳು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಕುಮಟಾಕ್ಕೆ ಬಂದರೆ ಮಹಿಳೆಯರು ಇನ್ನೂ ಹೆಚ್ಚಿನ ಸ್ವಾವಲಂಬಿ ಜೀವನವನ್ನು ಸಾಗಿಸಲು ಸಾಧ್ಯವಿದೆ. ಕುಮಟಾದ ಸ್ವಸಹಾಯ ಸಂಘದ ಮೂಲಕ ಮಹಿಳೆಯರಿಗೆ ಸಾಲ ನೀಡಿದರೆ ಖಂಡಿತವಾಗಿಯೂ ಮರು ಪಾವತಿಯಾಗುವ ವಿಶ್ವಾಸವಿದೆ. ಹೆಚ್ಚು ಸಾಲ ವಿತರಿಸಿದರೆ ಯಾವುದೇ ರೀತಿಯ ಮೋಸ ಮಾಡುವವರು ಕುಮಟಾ ಜನತೆಯಲ್ಲ ಎಂದರು.
ಡಾ. ಎಂ.ಎನ್.ರಾಜೇಂದ್ರಕುಮಾರ ನವೋದಯ ಸೌಹಾರ್ದ ಸಂಘದ ಅಧ್ಯಕ್ಷರೊಂದೆ ಅಲ್ಲದೇ ದಕ್ಷಿಣ ಕನ್ನಡ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷರಾಗಿ 4 ಬಾರಿ ಅವಿರೋಧ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತ ಸದಸ್ಯ, ಅಧ್ಯಕ್ಷರಾಗುವುದಕ್ಕೆ ಕಷ್ಟ ಪಡುವ ಕಾಲದಲ್ಲಿ 4 ಬಾರಿ ಅಧ್ಯಕ್ಷಗಾದಿ ಹಿಡಿದಿದ್ದು ಅವರ ಅಭಿವೃದ್ಧಿ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಅವರನ್ನು ಈ ಸ್ಥಾನದಲ್ಲಿ ನಿಲ್ಲಲು ಸಹಾಯವಾಗಿದೆ. ನವೋದಯ ಸೌಹಾರ್ದ ಸಹಕಾರಿ ಬ್ಯಾಂಕ್ ಶಾಖೆಯನ್ನು ಕುಮಟಾದಲ್ಲಿ ಆರಂಭಿಸಿದ್ದಕ್ಕೆ ಡಾ.ರಾಜೇಂದ್ರಕುಮಾರ್‍ಗೆ ಅಭಿನಂದನೆ ಸಲ್ಲಿಸಿದರು.
ನವೋದಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶವನ್ನು ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಾಲಕ್ಕೊಂದೆ ಬ್ಯಾಂಕಿಗೆ ಬರದೇ ದುಡಿದ ಸ್ವಲ್ಪ ಹಣವನ್ನು ಠೇವಣಿ ರೂಪದಲ್ಲಿ ಇಟ್ಟು ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸಿಕೊಳ್ಳಬೇಕು. ಮಹಿಳೆಯರು ಸಾಧನೆ ಮಾಡಬೇಕಾದರೆ ಮೊದಲು ಮನೆಯಿಂದ ಹೊರಬಂದು ಸಮಾಜದಲ್ಲಿ ನಡೆಯುತ್ತಿರುವ ಆಗು/ಹೋಗುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಇಂತಹ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಅಭಿವೃದ್ಧಿ ಸಾಧ್ಯವಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗ್ರಾಮೀಣ ಭಾಗದ ಜನತೆಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶಾಖಾ ಮುಖ್ಯಸ್ಥರು ಹೊರ ರಾಜ್ಯದವರಾಗಿರುವುದರಿಂದ ಕನ್ನಡ ಸ್ಪಷ್ಟವಾಗಿಲ್ಲದ ಕಾರಣ ಸಮರ್ಪಕ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲಿರುವುದರಿಂದ ಮಹಿಳೆಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸಲು ಹಿಂಜರೆಯುತ್ತಿದ್ದಾರೆ ಎಂದರು.
ಗಣಕೀಕರಣ ಉದ್ಘಾಟಿಸಿ ಪುರಸಭೆ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ, ಸ್ವಸಹಾಯ ಸಂಘಗಳು ಅಭಿವೃದ್ಧಿಯಾಗುವುದರಿಂದ ಮಹಿಳೆಯರಿಗೆ ಹೆಚ್ಚು ಸಹಾಯವಾಗುವುದರಿಂದ ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ದೊರೆಯುತ್ತದೆ. ನವೋದಯ ಸೌಹಾರ್ದ ಸಹಕಾರಿ ಬ್ಯಾಂಕ್ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಿ ಇತರ ಸಹಕಾರಿ ಬ್ಯಾಂಕುಗಳಿಗೆ ಮಾದರಿಯಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಭದ್ರತಾ ಕೊಠಡಿಯನ್ನು ತಾಲೂಕ ಪಂಚಾಯತ ಅಧ್ಯಕ್ಷೆ ವಿಜಯಾ ಪಟಗಾರ ಉದ್ಘಾಟಿಸಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಇರುವ ಮಹಿಳೆಯರನ್ನು ಸಮಾಜಕ್ಕೆ ಪರಿಚಯಿಸಿದವರು ಇಂತಹ ಸಹಕಾರಿ ಸಂಘಗಳು. ಮಹಿಳೆಯರು ಅಭಲೆಯರಲ್ಲ. ಸಭಲೆಯರು ಎಂದು ನವೋದಯ ಸಹಕಾರಿ ಸಂಘದವರು ಸಬೀತು ಪಡಿಸಿದ್ದಾರೆ. ಮಹಿಳೆಯರು ಸಹಕಾರಿ ಸಂಘದಲ್ಲಿ ಸಾಲ ತೆಗೆದು ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಮಕ್ಕಳನ್ನು ಸಾಧನೆಯತ್ತ ಕೊಂಡೊಯ್ಯಬೇಕು ಎಂದರು.
ನವೋದಯ ನೂತನ ಗುಂಪುಗಳನ್ನು ಉದ್ಯಮಿ ಸುಬ್ರಾಯ ವಾಳ್ಕೆ ಉದ್ಘಾಟಿಸಿ ಮಾತನಾಡಿ, ಸಮಾಜ ನಮಗೆ ಏನು ನೀಡುತ್ತಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯವಾಗಿದೆ. ಸ್ವಸಹಾಯ ಸಂಘಗಳು ಎಂದರೆ ಸಂಬಂಧವನ್ನು ಬೆಸೆಯುವ ಸಾಧನವಾಗಿದೆ. ಸಂಬಂಧ ಎನ್ನುವುದು ಪರೀಕ್ಷೆಯಲ್ಲಿ ಪಾಸು ಮಾಡಿ ಸಿಗುವಂತದ್ದಲ್ಲ. ಸಹಕಾರಿ ಸಂಘಗಳ ಮೂಲಕ ನಾವು ಪಡೆದುಕೊಂಡ ಫಲವನ್ನು ನಮ್ಮ ವೈಯ್ಯಕ್ತಿಕ ಹಿತಾಸಕ್ತಿ ಬಯಸದೇ ಮತ್ತೊಬ್ಬರಿಗೆ ಸಹಾಯ ಮಾಡುವುದು ಸಹಕಾರಿ ಸಂಘದ ಉದ್ದೇಶವಾಗಿದೆ. ಸಂಘಗಳು ಕೇವಲ ಸಾಲಕ್ಕಾಗಿ ಉಪಯೋಗವಾಗದೇ ಠೇವಣಿ ರೂಪದಲ್ಲಿ ಹೆಚ್ಚು ಹಣ ಉಳಿಸಿ ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸಬೇಕು. ಇಂದಿನ ಕಾಲದಲ್ಲಿ ಮದುವೆ ಮತ್ತು ಮುಂಜಿ ಕಾರ್ಯಕ್ರಮಗಳಿಗೆ ಹಣ ವ್ಯರ್ಥ ಮಾಡುವುದಕ್ಕಿಂತ ಶಿಕ್ಷಣ ಕ್ಷೇತ್ರದಲ್ಲಿ ಅದೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಣ ಉಪಯೋಗಿಸಬೇಕು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ದಕ್ಷಿಣ ಕನ್ನಡ ಮಧ್ಯವರ್ತಿ ಬಾಂಕಿನ ಅಧ್ಯಕ್ಷ ಹಾಗೂ ನವೋದಯ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರಕುಮಾರ ಮಾತನಾಡಿ, ಆತೀಕವಾಗಿ ಮಹಿಳೆಯರಿಗೆ ಸಹಾಯವಾಗುವ ಉದ್ದೇಶದಿಂದ ನವೋದಯ ಬ್ಯಾಂಕ್ ಪ್ರಾರಂಭಿಸಲಾಗಿದೆ. ಇದು ಸಾಮಾನ್ಯರ ಆರ್ಥಿಕ ಸಂಸ್ಥೆಯಾಗಿದ್ದು, ಸಾಮಾನ್ಯ ಜನರು ಬ್ಯಾಂಕಿನಲ್ಲಿ ಯಾವ ರೀತಿಯಲ್ಲಿ ವ್ಯವಹಾರ ಮಾಡಬೇಕು ಎಂಬುದರ ಬಗ್ಗೆ ಗ್ರಾಮೀಣ ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಬಡ ಜನರು ಹಣ ಉಳಿತಾಯ ಮಾಡುವ ದೃಷ್ಟಿಯಿಂದ ಈ ಬ್ಯಾಂಕ್ ಆರಂಭಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಧ್ಯವರ್ತಿ ಬ್ಯಾಂಕ್ ಮೂಲಕ ರೈತರಿಗೆ ವಿತರಿಸಿದ ಸಾಲ ಸಂಪೂರ್ಣವಾಗಿ ಮರುಪಾವತಿ ಮಾಡುತ್ತಿರುವುದರಿಂದ ಸಹಕಾರಿ ಕ್ಷೇತ್ರ ದಕ್ಷಿಣ ಕನ್ನಡದಲ್ಲಿ ಮುಂದುವರೆಲು ಸಾಧ್ಯವಾಗಿದೆ. ಮಹಿಳೆಯರು ಸ್ವ ಉದ್ಯೋಗದತ್ತ ಹೆಚ್ಚು ಆಸಕ್ತಿ ಹೊಂದಬೇಕಾಗಿದೆ. ತಮ್ಮ ಮನೆಯಲ್ಲಿ ಸಣ್ಣ ಉದ್ಯೋಗ ಮಾಡಿದರೆ ಮಹಿಳೆಯರಲ್ಲಿ ದಿನನಿತ್ಯ ಹಣ ಹರಿದಾಡುತ್ತದೆ. ಇದರಿಂದ ಮಹಿಳೆಯರು ದುಡಿದ ಹಣವನ್ನು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಠೇವಣಿ ರೂಪದಲ್ಲಿ ಸಂಗ್ರಹಿಸಿಡುವುದರಿಂದ ಕಷ್ಟ ಕಾಲದಲ್ಲಿ ಅದು ಉಪಯೋಗಕ್ಕೆ ಬರುತ್ತದೆ ಎಂದರು.
ಈ ವೇಳೆ ಕಟ್ಟಡದ ಮಾಲಕ ನಾಗೇಶ ಶಾನಭಾಗ, ಪತ್ರಕರ್ತ ನಾಗರಾಜ ಪಟಗಾರ, ಕುಮಟಾ ಶಾಖೆಯ ವ್ಯವಸ್ಥಾಪಕ ಹರೀಶ ಬಾಡ್ಕರ್ ಇವರನ್ನು ಸನ್ಮಾನಿಸಲಾಯಿತು.
ನವೋದಯ ಸೌಹಾರ್ದ ಸಹಕಾರಿ ನಿಯಮಿತದಿಂದ ನವೋದಯ ಗುಂಪುಗಳನ್ನು ಉದ್ಘಾಟಿಸಲಾಯಿತು ಹಾಗೂ ಗುಂಪುಗಳಿಗೆ ಸಾಲ ಹಾಗೂ ಚೈತನ್ಯ ವಿಮೆ ಚೆಕ್‍ನ್ನು ಗಣ್ಯರು ವಿತರಿಸಿದರು. ನವೋದಯ ಸೌಹಾರ್ದ ಸಹಕಾರಿ ನಿಯಮಿತದ ಮೇಲ್ವಿಚಾರಕರಾದ ಎಸ್.ವಾಸು, ಸುರೇಶ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು. ರಾಜು ಪೂಜಾರಿ ಸ್ವಾಗತಿಸಿದರು. ಸುದೇಶ ನಾಯ್ಕ ಹೊನ್ನಾವರ ನಿರೂಪಿಸಿದರು. ನ್ನೇಹಾ ಭಟ್ಟ ಪ್ರಾರ್ಥಿಸಿದರು. ಚಂದ್ರೇ ಗೌಡ ವಂದಿಸಿದರು.

RELATED ARTICLES  ಮುರ್ಡೇಶ್ವರದಲ್ಲಿ ಜಾತ್ರಾ ವೈಭವ: ಹರಿದು ಬಂದ ಭಕ್ತ ಸಾಗರ