ನವದೆಹಲಿ: ಗುಜರಾತ್ ವಿಧಾನಸಭೆಗೆ 2ನೆಯ ಹಂತದ ಮತದಾನದ ಮರುದಿನ ಅಂದರೆ ಡಿಸೆಂಬರ್ 15ರಿಂದ ಸಂಸತ್ ಚಳಿಗಾಲದ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತಂತೆ ಕೇಂದ್ರದ ಮೂಲಗಳ ಮಾಹಿತಿಯಂತೆ, ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಮಹತ್ವದ ಸಭೆ ನಡೆಸಿದ್ದು, ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಕುರಿತಾಗಿ ಚರ್ಚೆ ನಡೆದಿದೆ.
ಡಿಸೆಂಬರ್ 15ರಿಂದ ಜನವರಿ 5ರವರೆಗೂ ಸಂಸತ್ ಉಭಯ ಸದನಗಳ ಅಧಿವೇಶನ ನಡೆಸುವ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳನ್ನು ತಿಳಿಸಿದ ಸಚಿವ ಅರುಣ್ ಜೇಟ್ಲಿ ಈ ಕುರಿತಾಗಿ ಮಾತನಾಡಿ, ವಿಧಾನಸಭಾ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ಅಧಿವೇಶನ ಕುರಿತಾಗಿ ಇನ್ನೂ ದಿನಾಂಕ ನಿಗದಿ ಮಾಡಲಾಗಿಲ್ಲ ಎಂದಿದ್ದರು.