ಶಿರಸಿ : ಮಳೆಗಾಲ ಪ್ರಾರಂಭ ನಂತರ ಜಿಲ್ಲೆಯಲ್ಲಿ ಜಲಪಾತಗಳದ್ದೇ ಅಬ್ಬರ, ಕೆಲವು ಕಿ.ಮೀ.ಗಳ ಅಂತರದಲ್ಲಿ ಸೃಷ್ಟಿಯಾಗುವ ಕಿರುತೊರೆಗಳನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಾರೆ. ಇಂತಹದ್ದೇ ಮುರೇಗಾರ ಜಲಪಾತ ಮೌಲಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವುದು ಚಾರಣಪ್ರಿಯ ಅಸಮಾಧಾನಕ್ಕೆ ಕಾರಣವಾಗಿದೆ.
ತಾಲೂಕು ಕೇಂದ್ರದಿಂದ ಕೇವಲ 23 ಕಿ.ಮೀ ದೂರದ ಮುರೇಗಾರ ಜಲಪಾತ ಪ್ರಕೃತಿಯ ದಿವ್ಯ ಸೃಷ್ಠಿಗಳಲ್ಲೊಂದು. ಶಾಲ್ಮಲಾ ನದಿಯ ಉಪನದಿಯಾದ ಮುರೇಗಾರ್ ಹೊಳೆಗೆ ಹರಿದರಿದು ಬೇಸರ ಬಂದು ಅರೆಕ್ಷಣ ಮಲಗಿ ತೆವಳಿದಂತೆ ಭಾಸವಾಗುತ್ತದೆ. ಹರವಾದ ಕಲ್ಲು ಬಂಡೆಯ ಮೇಲೆ ಓರೆಯಾಗಿ ಸುರಿಯುವ ಜಲಧಾರೆಯ ಸೊಬಗು ಆಕರ್ಷಕವಾಗಿದೆ. ಆದರೆ ಈ ಸೊಬಗನ್ನು ಸವಿಯಲು ಪ್ರವಾಸಿಗರು ಪಡುವ ಪಡಿಪಾಡಿಲು ದೇವರಪ್ರೀತಿ, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿಗೆ ಬರುವ ರಸ್ತೆ ಸ್ಥಿತಿ ಶೋಚನೀಯವಾಗಿದೆ. ಜಲಪಾತದ ಬಳಿ ವಾಚ್‍ಮನ್‍ಗಳ ವ್ಯವಸ್ಥೆ ಇಲ್ಲ. ಪ್ರಾಣಾಪಾಯವಾದರೆ ಹೇಳುವವರಿಲ್ಲದ ಕಾರಣ ಪ್ರವಾಸಿಗಳು ಇತ್ತ ಹೆಜ್ಜೆಹಾಕಲು ಹಿಂಜರಿಯುತ್ತಿದ್ದಾರೆ.
ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಡಾಂಬರೀಕರಣ ಮಾಡಿ ಎಷ್ಟೋ ವರ್ಷ ಕಳೆದಿದೆ. ರಸ್ತೆಗಳು ಕಿತ್ತು ಹಳೆಯದಾಗಿದ್ದು, ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿವೆ. ಮಳೆಗಾಲದಲ್ಲಂತೂ ಈ ರಸ್ತೆಗಳಲ್ಲಿ ಪ್ರಯಾಣ ಮಾಡುವುದು ನರಕಯಾತನೆ ಎಂದು ಪ್ರವಾಸಿಗರನ್ನು ಕರೆತರುವ ವಾಹನ ಚಾಲಕರು ಗೋಳು ತೋಡಿಕೊಳ್ಳುತ್ತಾರೆ. ಜಲಪಾತದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕೆಂದು ಪ್ರವಾಸಿಗರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.