ಸಿದ್ದಾಪುರ: ನಿರ್ಮಾಣ ಹಂತದಲ್ಲಿರುವ ಪಟ್ಟಣದ ಮಿನಿ ವಿಧಾನಸೌಧ ಕಟ್ಟಡ ಭವ್ಯವಾಗಿ ತಲೆ ಎತ್ತಿದ್ದು, ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಜನತೆಯ ಹಲವು ದಶಕಗಳ ಬೇಡಿಕೆಯ ಹಿನ್ನೆಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ, ಇನ್ನು ಐದಾರು ತಿಂಗಳಲ್ಲಿ ಪೂರ್ಣ ಸಿದ್ಧಗೊಳ್ಳಬಹುದು ಎಂಬ ಆಶಾಭಾವ ಅಧಿಕಾರಿಗಳದ್ದು. ಈ ಕಟ್ಟಡದಲ್ಲಿ ಬೇಸ್‌ಮೆಂಟ್, ನೆಲ ಅಂತಸ್ತು ಹಾಗೂ 1, 2ನೇ ಮಹಡಿಗಳಿವೆ. ಇದರಲ್ಲಿ ತಹಶೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಉಪ ಖಜಾನೆ, ಆಹಾರ, ಚುನಾವಣೆ ಇನ್ನಿತರ ವಿಭಾಗಗಳು ಕಾರ್ಯನಿರ್ವಹಿಸಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

RELATED ARTICLES  ಇಂದಿನ(ದಿ-29/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

‘ಈ ಕಾಮಗಾರಿಯ ಗುತ್ತಿಗೆದಾರರು ಜಿ.ಪಿ.ರೇವಣಕರ್ ಅವರಾಗಿದ್ದು, 11 ತಿಂಗಳ ಅವಧಿಯ ಈ ಕಾಮಗಾರಿ 2017ರ ಜೂನ್‌ಗೆ ಮುಗಿಯಬೇಕಾಗಿತ್ತು. ಗುತ್ತಿಗೆದಾರರು ಮಾರ್ಚ್‌ (2018)ವರೆಗೆ ಕಾಮಗಾರಿ ವಿಸ್ತರಣೆಗೆ ಸಮಯ ಕೇಳಿಕೊಂಡಿದ್ದಾರೆ. ಇದು ದೊಡ್ಡ ಕಾಮಗಾರಿಯಾಗಿದ್ದು, ಕಾಮಗಾರಿ ಆರಂಭವಾದ ನಂತರ ಒಂದು ದಿನ ಕೂಡ ಕಟ್ಟಡದ ಕೆಲಸ ಸ್ಥಗಿತಗೊಂಡಿಲ್ಲ. ಇದೀಗ ಇದಕ್ಕೆ ಹೆಚ್ಚುವರಿ ಅನುದಾನವನ್ನೂ ಕೇಳಲಾಗಿದೆ. ಪೀಠೋಪಕರಣ ಹಾಗೂ ಇತರ ಸೌಲಭ್ಯ ಕಲ್ಪಿಸಲು ₹ 2.15 ಕೋಟಿ ಮೊತ್ತದ ಅನುದಾನದ ಪ್ರಸ್ತಾವವನ್ನೂ ಇಡಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅನಿಲ್‌ಕುಮಾರ್ ತಿಳಿಸಿದರು.

RELATED ARTICLES  ಕೊರೋನಾ : ಇಂದು ಉತ್ತರ ಕನ್ನಡದಲ್ಲಿ ಮೂವರಲ್ಲಿ ಪಾಸಿಟೀವ್ : ಮೂವರು ಡಿಶ್ಚಾರ್ಜ

‘ಈ ಕಾಮಗಾರಿ ₹5 ಕೋಟಿ ಮೊತ್ತದ್ದಾಗಿದೆ. ಈ ಕಟ್ಟಡವನ್ನು ಇನ್ನಷ್ಟು ಸುಸಜ್ಜಿತಗೊಳಿಸಲು ಹೆಚ್ಚುವರಿ ಅನುದಾನವನ್ನೂ ಕೇಳಿದ್ದೇವೆ. ಇದನ್ನು ಪಡೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಶಿಫಾರಸು ಅಗತ್ಯವಾಗಿದ್ದು, ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ವಿ.ಜನ್ನು ತಿಳಿಸಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾಮಗಾರಿಯ ಪರಿಶೀಲನೆಯನ್ನೂ ನಡೆಸಿದ್ದರು. ಕಾಮಗಾರಿಯನ್ನು ಫೆಬ್ರುವರಿ(2018ರ)ಯೊಳಗೆ ಮುಕ್ತಾಯಗೊಳಿಸಲು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮತ್ತು ಕಾಮಗಾರಿಯ ಗುತ್ತಿಗೆದಾರರಿಗೆ ಅವರು ಆಗ ಸೂಚನೆ ನೀಡಿದ್ದರು.