ಗುರ್ಗಾಂವ್ ನಲ್ಲಿ ಇತ್ತೀಚೆಗೆ ಪ್ರದ್ಯುಮ್ನ್ ಎಂಬ 7 ವರ್ಷದ ಪುಟ್ಟ ವಿದ್ಯಾರ್ಥಿಯನ್ನು ರಯ್ಯಾನ್ ಇಂಟರ್ ನ್ಯಾಶನಲ್ ಶಾಲೆಯ ಬಾತ್ ರೂಂ ನಲ್ಲಿ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಈ ಪುಟಾಣಿಯ ಕೊಲೆ ಪ್ರಕರಣವು ದಿನ ಕಳೆದಂತೆ ವಿವಿಧ ತಿರುವುಗಳನ್ನು ಪಡೆಯುತ್ತಿತ್ತು. ಆದರೆ ಕೊನೆಗೂ ಪುಟಾಣಿ ವಿದ್ಯಾರ್ಥಿಯ ಕೊಲೆ ಆರೋಪಿಗಿರುವ 11ನೇ ತರಗತಿಯ ವಿದ್ಯಾರ್ಥಿಯನ್ನು ಸಿಬಿಐ ಬಂಧಿಸುವಲ್ಲಿ ಸಫಲವಾಗಿದೆ. ಆದರೆ ಈ ಪ್ರಕರಣವನ್ನು ಮುಚ್ಚಿ ಹಾಕಿ ಅಮಾಯಕ ಬಸ್ ಕಂಡಕ್ಟರ್ ಒಬ್ಬನನ್ನು ಸಿಲುಕಿಸಿ ಕೈತೊಳೆಯಲು ಸ್ಥಳೀಯ ಪೊಲೀಸರ ಕೃತ್ಯವು ಕೊನೆಗೂ ಬಯಲಾಗಿದೆ.
ಜಾಮೀನಿನ ಮೇಲೆ ಬಿಡುಗಡೆಯಾದ ಅಶೋಕ್, ಪೊಲೀಸರು ತನ್ನನ್ನು ನಡೆಸಿಕೊಂಡ ರೀತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಂಡಕ್ಟರ್ ಅಶೋಕ್ ಈ ಬಗ್ಗೆ ಆರೋಪಿಸುತ್ತಾ, ಪೊಲೀಸರು ತಾನು ಮಾಡದ ಈ ಅಪರಾಧವನ್ನು ಒಪ್ಪಿಕೊಳ್ಳಲು ತನ್ನನ್ನು ಬರ್ಬರವಾಗಿ ಚಿತ್ರಹಿಂಸೆ ನೀಡಿದ್ದಾರೆ. ರಕ್ತಸಿಕ್ತವಾಗಿದ್ದ ಪುಟಾಣಿಯ ಮೃತದೇಹವನ್ನು ಶಾಲಾ ಪ್ರಾಂಶುಪಾಲೆಯ ನಿರ್ದೇಶನದ ಮೇರೆಗೆ ವಾಹನಕ್ಕೆ ಹಾಕಿದ್ದೆ. ಇದನ್ನೇ ಪೊಲೀಸರು ಸಾಕ್ಷಿಯಾಗಿ ನನ್ನನ್ನು ಫಿಕ್ಸ್ ಮಾಡಲು ಪ್ರಯತ್ನಿಸಿದಾರೆ. ಸುಮಾರು ನಾಲ್ಕು ಗಂಟೆಯ ತನಕ ಪೊಲೀಸರು ತನ್ನನ್ನು ಥಳಿಸಿದ್ದರು, ನನ್ನ ದೇಹಕ್ಕೆ ಕರೆಂಟ್ ಶಾಕ್ ಕೊಟ್ಟಿದ್ದರು. ಇಂಜೆಕ್ಷನ್ ಕೊಟ್ಟಿದ್ದರು. ನನ್ನ ಇಡೀ ಕುಟುಂಬವನ್ನು ಎನ್ಕೌಂಟರ್ ಮಾಡಿ ಕೊಲ್ಲುವ ಬೆದರಿಕೆ ಹಾಕಿ ಈ ಅಪರಾಧ ಒಪ್ಪಿಕೊಳ್ಳಲು ಬಲವಂತ ಮಾಡಿದ್ದರು. ಎರಡು ತಿಂಗಳಿನಿಂದ ಜೈಲಿನಲ್ಲಿದ್ದೆ. ಕಳೆದ ಒಂದೂವರೆ ತಿಂಗಳಿನಿಂದ ಹೊದ್ದು ಕೊಳ್ಳಲು ಬೆಡ್ ಶೀಟನ್ನೂ ನೀಡಿರಲ್ಲಿಲ್ಲ. ಚಳಿಯಲ್ಲೇ ಮಲಗಿದ್ದೆ. ಬಂಧನವಾದಂದಿನಿಂದ ಟಿವಿಯನ್ನೂ ನೋಡಿರದ ಕಾರಣ ಹೊರಗೆ ಏನು ನಡೆಯುತ್ತಿದೆ ಎಂದು ಕೂಡಾ ತಿಳಿಯುತ್ತಿರಲಿಲ್ಲ. ಪೊಲೀಸರ ಚಿತ್ರಹಿಂಸೆ ತಾಳಲಾರದೆ ಮಾಡದ ಅಪರಾಧವನ್ನು ಮಾಧ್ಯಮಗಳ ಮುಂದೆ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಅಶೋಕ್ ನ ಅತ್ತಿಗೆ ಅನುರಾಧರವರು ಮಾಧ್ಯಮಗಳಿಗೆ ಉತ್ತರಿಸುತ್ತಾ, ಅಶೋಕ್ ಮಾಡಿರುವ ಹತ್ಯೆಯಿಂದಾಗಿ ಊರಲ್ಲಿ ದಂಗೆಗಳಾಗುತ್ತಿವೆ, ರಾಜಕೀಯ ನಾಯಕರು ಬಹಳ ಸಿಟ್ಟಾಗಿದ್ದಾರೆ. ಪರಿಸ್ಥಿತಿ ಶಾಂತಗೊಳಿಸಲು ಸಧ್ಯಕ್ಕೆ ಈ ಅಪರಾಧ ಒಪ್ಪಿಕೊಳ್ಳಲ ಹೇಳಿ. ನಂತರ ಎಲ್ಲಾ ಶಾಂತವಾದ ಮೇಲೆ ನಾವೇ ಬಿಡಿಸುತ್ತೇವೆ ಎಂದು ಬೆದರಿಸಿದ್ದರು ಎಂದು ಆರೋಪಿಸಿದ್ದಾರೆ. ಅಶೋಕ್ ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿರುವ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಶನರ್ ಸಂದೀಪ್ ರವರು ತಿಳಿಸಿದ್ದಾರೆ.
ಆದರೆ ಇದೇ ಜಾಗದಲ್ಲಿ ನಮ್ಮ ಮನೆಯ ಯಾರನ್ನಾದರೂ ಇದೇ ರೀತಿ ಸಿಲುಕಿಸಿದ್ದಿದ್ದರೆ ಹೇಗಾಗಬೇಡ ಹೇಳಿ? ಇದೇ ರೀತಿ ಅದೆಷ್ಟೋ ಮಂದಿ ತಾವು ಮಾಡದ ತಪ್ಪಿಗೆ ಇನ್ನೂ ಕೂಡಾ ಜೈಲುಗಳಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದರೆ. ಪೊಲೀಸರ ಇಂತಹ ಮನಸ್ಥಿತಿಯನ್ನು ಖಂಡಿಸಲೇಬೇಕಿದೆ ಹಾಗೂ ಜಗತ್ತಿಗೆ ಈ ಕರಾಳಮುಖದ ಅನಾವರಣವಾಗಬೇಕಿದೆ.