ಟೊಮೆಟೋ ರಸಂ, ಬೀನ್ಸ್-ಕ್ಯಾರೆಟ್ ಪಲ್ಯಗಳಿಲ್ಲದೇ ಊಟವೇ ಅಪೂರ್ಣವೆಂಬಂತಹ ದಕ್ಷಿಣ ಭಾರತೀಯರಿಗೆ ತರಕಾರಿ ಬೆಲೆ ಗಗನಕ್ಕೇರಿರುವುದು ಚಿಂತೆಗೆ ಕಾರಣವಾಗಿದೆ. ಹೌದು. ಟೊಮೆಟೋ, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ ಸೇರಿದಂತೆ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಒಂದೇಡ್ ಸಮನೆ ಏರಿಕೆಯಾಗುತ್ತಿದ್ದು, ತರಕಾರಿಗಳನ್ನು ಖರೀದಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಬೆಳೆಗಳು ಹಾನಿಗೀಡಾದ ಹಿನ್ನಲೆಯಲ್ಲಿ ತರಕಾರಿ ಬೆಲೆಗಳು ಗಗನಮುಖಿಯಾಗಿವೆ.ಇದರಿಂದ ಬೆಲೆ ಏರಿಕೆ ನಡುವೆಯೂ ನಿತ್ಯ ಕೊಳ್ಳಲೇಬೇಕಾದ ಅನಿವಾರ್ಯ ಗ್ರಾಹಕರಿಗಾದರೆ, ಖರೀದಿ ಮಾಡಿದ ತರಕಾರಿಯನ್ನು ಹೇಗೆ ಮಾರಾಟ ಮಾಡಬೇಕು ಎಂಬ ಚಿಂತೆ ಚಿಲ್ಲರೆ ವ್ಯಾಪಾರಿಗಳದ್ದಾಗಿದೆ.
ಬೆಂಗಳೂರು ಮಿರರ್ ಪತ್ರಿಕೆಗೆ ಹಾಪ್ ಕಾಮ್ಸ್ ಅಧಿಕಾರಿಗಳು ತಿಳಿಸಿರುವ ಮಾಹಿತಿ ಪ್ರಕಾರ ಕೆಲ ದಿನಗಳ ಹಿಂದೆ ಸುರಿದ ವ್ಯಾಪಕ ಮಳೆಯಿಂದಾಗಿ ಬೆಳೆಗಳು ನಾಶವಾಗಿವೆ. ಅಲ್ಲದೇ ಇಳುವರಿ ಕಡಿಮೆಯಾಗಿರುವುದರಿಂದ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಕ್ಯಾರೆಟ್ ಬೆಲೆ ತೀವ್ರ ಹೆಚ್ಚಳವಾಗಿದೆ. ನಾವು ಖರೀದಿಸಿರುವ ಕ್ಯಾರೆಟ್ ಉತ್ತಮ ಗುಣಮಟ್ಟದಿಂದ ಕೂಡಿಲ್ಲ, ಏಕೆಂದರೆ ಮಾಲೂರು ಬೆಂಗಳೂರಿನ ಪ್ರಮುಖ ಕ್ಯಾರೆಟ್ ಸರಬರಾಜುದಾರರಾಗಿದ್ದು, ಭಾರೀ ಮಳೆಯಿಂದಾಗಿ ಈ ಭಾರಿ ಕ್ಯಾರೆಟ್ ಬೆಳೆ ನಾಶವಾಗಿದೆ. ಅಲ್ಲದೇ ಉತ್ತಮವಾದ ಗುಣಮಟ್ಟದ ಕ್ಯಾರೆಟ್ ಕೂಡ ಸಿಗುತ್ತಿಲ್ಲ. ನಮಗೆ ಸಿಕ್ಕುರುವುದು ಚಿಕ್ಕದಾದ ಕ್ಯಾರೆಟ್ ಆಗಿದ್ದು ಅದು ಕೂಡ ಕೆ ಜಿಗೆ 90 ರೂ. ಎಂದು ತಿಳಿಸಿದ್ದಾರೆ.