ಯಲ್ಲಾಪುರ : ಬೃಹತ್ ದ್ವನಿವರ್ಧಕ (DJ) ಬಳಕೆ ಹಾಗೂ ಮೆರವಣಿಗೆಯ ಸಮಯ ಬದಲಾವಣೆ ಕುರಿತು ಗುರುವಾರ ಸಂಜೆ ಪಟ್ಟಣದ ತಾ.ಪಂ ಆವಾರದ ಗಾಂಧಿ ಕುಟೀರದಲ್ಲಿ ನಡೆದ ಡಿ.2 ರಂದು ನಡೆಯುವ ಈದ್ ಮಿಲಾದ ಶಾಂತಿ ಸಭೆ ಭಾರಿ ವಾಗ್ವಾದಗಳಿಗೆ ಕಾರಣವಾಯಿತು. ಡೀಜೆ ಅವಶ್ಯವಾಗಿ ಬೇಕು ಮತ್ತು ಬೆಳಗ್ಗಿನ ಮೆರವಣಿಗೆಯನ್ನು ಮಧ್ಯಾಹ್ನ ನಡೆಸಲು ಅವಕಾಶ ಮಾಡಿಕೊಡುವಂತೆ ಯುವಕರ ಗುಂಪು ಆಗ್ರಹಿಸಿತು.

ತಹಶೀಲ್ದಾರ ಡಿ.ಜಿ.ಹೆಗಡೆ ಅಧ್ಯಕ್ಷತೆಯಲ್ಲಿ ಈದ್ ಮೀಲಾದ್ ಉನ್ನಬಿ ಶಾಂತಿ ಸಭೆ ನಡೆಯುತ್ತಿತ್ತು, ಡಿಜೆ ಬೇಡವೆಂದು ಪಟ್ಟಣದ ನಾಲ್ಕು ಜಮಾತಗಳ ಪ್ರಮುಖರು ಈಗಾಗಲೇ ಲಿಖಿತವಾಗಿ ಮನವಿ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಹಶೀಲ್ದಾರ ಹೇಳುತ್ತಿದ್ದಂತೆ, ಮಾತಿಗೆ ಅಡ್ಡಿ ಪಡಿಸಿದ ಯುವಕರು ಕಳೆದ ಹಲವಾರು ವರ್ಷದಿಂದ ಈದ್ ಮೀಲಾದ್ ಹಬ್ಬದ ಮೆರವಣಿಗೆಗೆ ಡಿಜೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದುವರೆಗೂ ಯಾರಿಗೂ ನಾವು ಬಳಸಿರುವ ಡಿಜೆಯಿಂದ ತೊಂದರೆಯಾಗಿಲ್ಲ, ಈ ವರ್ಷ ಈ ಹೊಸ ನಿರ್ಬಂಧ ಯಾಕೆ ಎಂದು ಪ್ರಶಿಸಿದರು.

ಡಿಜೆ ಬಳಸುವುದರಿಂದ ಸಾರ್ವಜನಿಕರಿಗೆ, ಅನಾರೋಗ್ಯ ಪೀಡಿತರಿಗೆ ತೊಂದರೆಯಾಗುತ್ತದೆ, ಹೀಗಾಗಿ, ಡಿಜೆ ಬೇಡವೆಂದು ತಹಶೀಲ್ದಾರ ಸಮರ್ಥಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಯುವಕರ ಗುಂಪು, ಜನ ಸಾಮಾನ್ಯರಿಗೆ ಅಷ್ಟೊಂದು ತೊಂದರೆಯಾಗುವುದಾದರೆ ಯಲ್ಲಾಪುರದ ಎಲ್ಲ ಸಾರ್ವಜನಿಕ ಹಬ್ಬಗಳಲ್ಲಿ ಡಿಜೆ ಬಳಸುವುದಕ್ಕೆ ಅವಕಾಶ ಕೊಡಬೇಡಿ ಎಂದು ಒತ್ತಾಯಿಸಿ, ನಮಗೆ ಒಂದು ನಿಯಮ ಇನ್ನೊಬ್ಬರಿಗೆ ಮತ್ತೊಂದು ನಿಯಮವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

RELATED ARTICLES  ಇಂದು 16ನೇ ವರ್ಷದ 'ಶರಾವತಿ ಉತ್ಸವ'

ಒಂದು ಹಂತದಲ್ಲಿ ಈ ವಿಷಯ ಅಧಿಕಾರಿಗಳು, ಮುಸ್ಲಿಂ ಯುವಕರು ಹಾಗೂ ಜಮಾತೆಗಳ ಪ್ರಮುಖರ ಮಧ್ಯೆ ಏರು ದ್ವನಿಯಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಯುವಕರ ಗುಂಪು ಸಭೆಯನ್ನು ಬಹಿಷ್ಕರಿಸಿ ಹೋರನಡೆಯಲು ಮುಂದಾಯಿತು. ಅಧಿಕಾರಿಗಳು ಯುವಕರ ಮನವೊಲಿಸಿ ಸಭೆಯಲ್ಲಿ ಒಂದು ನಿರ್ಣಯಕ್ಕೆ ಬರುವ ಹೊರ ಹೋಗುತ್ತಿದ್ದ ಯುವಕರನ್ನು ಸಭೆಯಲ್ಲಿ ಉಳಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಮಾತದ ಪ್ರಮುಖರು ಬೆಳಿಗ್ಗೆ ನಡೆಯುವ ಮೆರವಣಿಗೆಯನ್ನು ಸಂಜೆ ನಡೆಸಲು ಒಪ್ಪಿಕೊಂಡರಾದರೂ ಡಿಜೆ ಬಳಕೆ ಇಸ್ಲಾಮಿನಲ್ಲಿ ಅವಕಾಶವಿಲ್ಲ ಹೀಗಾಗಿ ಅದು ಬೇಡವೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಡಿ ಶಫಿ ಶೇಖ್(ಪುಂಗಿ ಶಫಿ), ಎಲ್ಲವೂ ಇಸ್ಲಾಮ್ ಪ್ರಕಾರ ನಡೆಯುತ್ತಿಲ್ಲ, ಡಿಜೆ ಬಳಕೆಯಿಂದ ಧರ್ಮಕ್ಕೆ ಯಾವುದೇ ಅಪಮಾನವಾಗುವುದಿಲ್ಲ ಎಂದು ವಾದ ಮಾಡಿದರು.

ಪಿಐ ಡಾ.ಮಂಜುನಾಥ ನಾಯಕ ಮಾತನಾಡಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಹಾಳಾಗದಂತೆ ಯುವಕರು ಲಿಖಿತ ರೂಪದಲ್ಲಿ ತಮಗೆ ಮನವಿ ಸಲ್ಲಿಸಿದರೆ, ತಮ್ಮ ಜವಾಬ್ದಾರಿಯಲ್ಲಿ ಒಂದು ಡಿಜೆಗೆ ಅವಕಾಶ ಮಾಡಿಕೊಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರಾದರೂ ಹಿರಿಯ ಅಧಿಕಾರಿಗಳು ಒಪ್ಪಿಗೆ ಅಗತ್ಯವೆಂದರು.

RELATED ARTICLES  ಸ್ವರಾಂಗಣ ಉದ್ಘಾಟನೆ ಹಾಗೂ ಗಮನಸೆಳೆದ ಗಾನ-ನಾಟ್ಯ ವೈಭವ.

ಡಿವೈಎಸ್ಪಿ ನಾಗೇಶ ಶೆಟ್ಟಿ ಮಾತನಾಡಿ, ಹಬ್ಬಗಳ ಆಚರಣೆ ಸಮಾಜದಲ್ಲಿ ಉಲ್ಲಾಸ ತರುವಂತಿರಬೇಕು, ಸಮಾಜದ ಮಧ್ಯೆ ಒಡಕಾಗಬಾರದು. ಜಮಾತೆ ಮತ್ತು ಯುವಕರ ತಂಡಗಳು ಎಲ್ಲರೂ ಸೇರಿ ಸಭೆ ನಡೆಸಿ ಮತ್ತೊಮ್ಮೆ ಸ್ಪಷ್ಟ ನಿರ್ಣಯಕ್ಕೆ ಬಂದು, ಮೆರವಣಿಗೆಯ ರಸ್ತೆ, ಸಮಯ, ಬ್ಯಾನರ್ ಅಳವಡಿಸುವ ಸ್ಥಳ ಹಾಗೂ ಸ್ಥಳದ ಪರವಾನಿಗೆ ಎಲ್ಲವನ್ನು ಪೊಲೀಸ್ ಠಾಣೆಗೆ ಮುಂಚಿತವಾಗಿ ನೀಡುವಂತೆ ಸೂಚಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಮಹ್ಮದ ಗೌಸ್, ಉಲ್ಲಾಸ ಶಾನಭಾಗ, ಕದಿಮ ಜಾಮ್ಯಾ ಮಸಜೀದ್ ಮುಖ್ಯಸ್ಥ ಬಾಬರ್ ಸಯ್ಯದ್ ತಳ್ಳಿಕೇರಿ, ಗರಿಬುನ್ ನವಾಜ್ ಮಸಜೀದ್ ಪ್ರಮುಖ ಅಬ್ದುಲ್ ಅಲಿ, ಬಾಬಾಜಾನ್ ಶೇಖ್, ಗೌಸಿಯ ಮಸಜೀದನ ಹಸನ ಶೇಖ್, ಬಿಲಾಲ ಮಸಾಜಿದನ ಮುನಾಫ್ ಶೇಖ್, ಮುಸ್ಲಿಂ ಯುವಕರ ತಂಡದ ಕೈಸರ್ ಸಯ್ಯದ್ ಅಲಿ, ಶಬ್ಬೀರ್ ಹಲವಾಯಿಗರ್, ಸಯ್ಯದ್ ಅಲಿ, ಪ.ಪಂ ಅಧ್ಯಕ್ಷ ಶಿರೀಷ ಪ್ರಭು ಮುಂತಾದವರು ಚರ್ಚೆಯಲ್ಲಿ ಮಾತನಾಡಿದರು.
ಪಿ.ಎಸ್.ಐ ಲಕ್ಕಪ್ಪ ನಾಯ್ಕ ವೇಧಿಕೆಯಲ್ಲಿದ್ದರು. ಗಣ್ಯ ನಾಗರಿಕರಾದ ನಂದನ ಬಾಳಗಿ, ನಾರಾಯಣ ನಾಯಕ (ನನ್ನಿ), ಶಕೀಲ್ ಅಹ್ಮದ್ ಮುಂತಾದವರು ಭಾಗವಹಿಸಿದ್ದರು.