ಸುಂದರವಾಗಿರುವ ಕೇಶರಾಶಿಯಿದ್ದರೆ ಆ ಮಹಿಳೆಯ ಸೌಂದರ್ಯವು ಮತ್ತಷ್ಟು ಹೆಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ. ಸುಂದರ ಕೂದಲು ಪಡೆಯಲು ಅದರ ಆರೈಕೆ ಕೂಡ ಮಾಡಬೇಕಾಗುವುದು ಅಗತ್ಯ. ಉದ್ದ ಕೂದಲಿನ ಆರೈಕೆ ತುಂಬಾ ಕಠಿಣವೆನ್ನಬಹುದು. ಯಾಕೆಂದರೆ ಕೂದಲು ಉದ್ದಗಿದ್ದರೆ ಅದನ್ನು ತೊಳೆಯುವುದು, ಎಣ್ಣೆ ಹಾಕುವುದು ಮತ್ತು ಬಾಚಿಕೊಳ್ಳುವುದು ತುಂಬಾ ಕಷ್ಟ.
ಆದರೆ ಇಂದಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ಕೂದಲಿನ ಆರೈಕೆಗೆ ಯಾರೂ ಹೆಚ್ಚಿನ ಗಮನಹರಿಸುವುದೇ ಇಲ್ಲ. ಇದರಿಂದಾಗಿ ಕೂದಲಿನ ವಿವಿಧ ರೀತಿಯ ಸಮಸ್ಯೆಗಳಾದ ಕೂದಲು ಉದುರುವಿಕೆ, ತುಂಡಾಗುವುದು, ತಲೆಹೊಟ್ಟು, ಒಣ ತಲೆಬುರುಡೆ, ಬೋಳಾಗುವುದು ಇತ್ಯಾದಿ ಕಾಣಿಸಿಕೊಳ್ಳುವುದು.
ಕೇವಲ ಶಾಂಪೂ ಮತ್ತು ಎಣ್ಣೆಯಿಂದ ಇಂತಹ ಸಮಸ್ಯೆ ಹೋಗಲಾಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕೂದಲಿನ ಕೆಲವು ಮಾಸ್ಕ್ ಬಳಸಿಕೊಂಡರೆ ಒಳ್ಳೆಯದು. ಈ ಮಾಸ್ಕ್‌ಗಳನ್ನು ತಲೆಗೆ ಹಚ್ಚಿಕೊಂಡು ರಾತ್ರಿಯಿಡಿ ಕೂದಲಿನಲ್ಲಿ ಬಿಟ್ಟರೆ ಮರುದಿನ ಕೂದಲು ಕಾಂತಿಯುತವಾಗುವುದು.
ಮನೆಯಲ್ಲೇ ತಯಾರಿಸಬಹುದಾದ ಕೆಲವು ಮಾಸ್ಕ್ ಗಳ ಬಗ್ಗೆ ತಿಳಿಸಲಿದ್ದೇವೆ. ಆದರೆ ಇದು ತುಂಬಾ ಜಿಗುಟು ಹಾಗೂ ವಾಸನೆ ಹೊಂದಿರುವುದು. ಈ ಮಾಸ್ಕ್ ಬಳಸಿಕೊಂಡರೆ ಮರುದಿನ ಬೆಳಗ್ಗೆ ಎದ್ದು ಕೂದಲಿಗೆ ಸ್ನಾನ ಮಾಡುವುದು ಅತೀ ಅಗತ್ಯವಾಗಿದೆ. ವಾರಾಂತ್ಯ ಅಥವಾ ನಿಮಗೆ ಸಮಯ ಸಿಗುವಾಗ ಈ ಮಾಸ್ಕ್ ಬಳಸಿಕೊಳ್ಳಿ. ಈ ಮಾಸ್ಕ್ ತಯಾರಿಸಲು ಯಾವೆಲ್ಲಾ ಸಾಮಗ್ರಿಗಳು ಬೇಕು ಮತ್ತು ಇದನ್ನು ತಯಾರಿಸಿ, ಬಳಸುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ತಿಳಿಯಿರಿ.
ನೀವೇ ತಯಾರಿಸಬಹುದಾದ ಕೆಲವು ಮಾಸ್ಕ್‌ಗಳು
ಹರಳೆಣ್ಣೆ+ ಬಿಯರ್+ ಮೊಟ್ಟೆ ಲೋಳೆ+ ಹಸಿ ಜೇನುತುಪ್ಪ (ರಾತ್ರಿ ತಲೆಗೆ ಹಚ್ಚಿಕೊಳ್ಳುವ ಕೂದಲಿನ ಮಾಸ್ಕ್)
*ಹರಳೆಣ್ಣೆ ಮತ್ತು ಬಿಯರ್ ನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಳ್ಳಿ.
*ಒಂದು ಚಮಚ ಎಣ್ಣೆ ಮತ್ತು ಒಂದು ಚಮಚ ಬಿಯರ್ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಒಂದು ಚಮಚ ಎಣ್ಣೆ ಮತ್ತು ಬಿಯರ್ ಹಾಕಿದ್ದರೆ ಒಂದು ಮೊಟ್ಟೆ ಲೋಳೆ ಹಾಕಿ. ಎಣ್ಣೆ ಮತ್ತು ಬಿಯರ್ ಹೆಚ್ಚು ಹಾಕಿದ್ದರೆ ಮೊಟ್ಟೆ ಹೆಚ್ಚಿಸಿ.
*ಮೊಟ್ಟೆಯ ಲೋಳೆಯನ್ನು ಒಡೆಯಬೇಡಿ. ಬಿಯರ್ ಮತ್ತು ಎಣ್ಣೆ ಜತೆ ಮಿಶ್ರಣ ಮಾಡಿ.
*ಅಂತ್ಯದಲ್ಲಿ ಒಂದು ಚಮಚ ಹಸಿ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ.
*ಈಗ ನೀವೇ ಮನೆಯಲ್ಲಿ ತಯಾರಿಸಿದ ಮಾಸ್ಕ್ ಬಳಸಲು ತಯಾರಾಗಿದೆ.
ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಂಡು ಶಾವರ್ ಕ್ಯಾಪ್ ಧರಿಸಿ ಮಲಗಿ. ಮರುದಿನ ಎದ್ದು ತಲೆಗೆ ಸ್ನಾನ ಮಾಡುವಾಗ ಶಾಂಪೂ ಬಳಸಿ.
ತೆಂಗಿನ ಹಾಲು+ ಅರ್ಗನ್ ಎಣ್ಣೆ(ರಾತ್ರಿ ಬಳಸುವ ಮಾಸ್ಕ್)
*ಮಾರುಕಟ್ಟೆಯಲ್ಲಿ ಸಿಗುವ ತೆಂಗಿನ ಹಾಲಿಗಿಂತ ನೀವೇ ಮನೆಯಲ್ಲಿ ಕಾಯಿ ತುರಿದು ಹಾಲು ತೆಗೆಯಿರಿ.
*ಒಂದು ಕಪ್ ತೆಂಗಿನಹಾಲಿಗೆ ಅರ್ಧ ಕಪ್ ಅರ್ಗನ್ ತೈಲ ಹಾಕಿ. ಹಾಲು ಮತ್ತು ಎಣ್ಣೆ ಮಿಶ್ರಣವಾಗಲು ಸ್ವಲ್ಪ ಸಮಯ ಬೇಕಾಗಬಹುದು.
*ತೆಂಗಿನಹಾಲು ಮತ್ತು ಅರ್ಗನ್ ತೈಲದ ಮಿಶ್ರಣವನ್ನು ಕೂದಲಿನ ತುದಿಯಿಂದ ಬುಡದ ತನಕ ಸರಿಯಾಗಿ ಹಚ್ಚಿಕೊಳ್ಳಿ.
*ಮಲಗುವಾಗ ಶಾವರ್ ಕ್ಯಾಪ್ ಹಾಕಿ.
*ಮರುದಿನ ಬೆಳಗ್ಗೆ ಎದ್ದು ಶಾಂಪೂ ಹಾಕಿ ಕೂದಲು ತೊಳೆಯಿರಿ.
ಬಾಳೆಹಣ್ಣು+ಅವಕಾಡೊ+ತೆಂಗಿನೆಣ್ಣೆ(ರಾತ್ರಿ ಬಳಸುವ ಕೂದಲಿನ ಮಾಸ್ಕ್)
*ತೆಂಗಿನೆಣ್ಣೆ ಹಚ್ಚಿಕೊಂಡು ರಾತ್ರಿ ಮಲಗುವುದು ಸಾಮಾನ್ಯ ವಿಚಾರ. ತೆಂಗಿನೆಣ್ಣೆಗೆ ಎರಡು ರೀತಿಯ ಹಣ್ಣುಗಳನ್ನು ಹಾಕಿಕೊಂಡರೆ ಕೂದಲಿನ ಆರೈಕೆ ಮತ್ತಷ್ಟು ಒಳ್ಳೆಯದಾಗುವುದು. ಬಾಳೆಹಣ್ಣು ಮತ್ತು ಅವಕಾಡೊ ಹಣ್ಣು ಬಳಸಿ.
*ಬಾಳೆಹಣ್ಣು, ಅವಕಾಡೊ ಮತ್ತು ತೆಂಗಿನೆಣ್ಣೆಯು ಸರಿಯಾದ ಪ್ರಮಾಣದಲ್ಲಿ ಇರುವುದು ಅತೀ ಅಗತ್ಯವಾಗಿದೆ. ಯಾವುದೇ ಸಾಮಗ್ರಿಯು ಸ್ವಲ್ಪ ಹೆಚ್ಚಾದರೂ ಮಾಸ್ಕ್ ಹಾಳಾಗುವುದು.
*ಅವಕಾಡೊದ ಸಿಪ್ಪೆ ತೆಗೆದು ಅದರ ತಿರುಳು ತೆಗೆಯಿರಿ. ಇದಕ್ಕೆ ಅರ್ಧ ಅವಕಾಡೊ ಬಳಸಿ.
*ಅವಕಾಡೊ ತಿರುಳಿಗೆ ಅರ್ಧ ಬಾಳೆಹಣ್ಣು ಬಳಸಿ.
*ತೆಂಗಿನೆಣ್ಣೆ ಸ್ವಲ್ಪ ಬಿಸಿ ಮಾಡಿಕೊಂಡು ಅದನ್ನು ಹಣ್ಣಿನ ತಿರುಳಿಗೆ ಹಾಕಿಕೊಳ್ಳಿ. ಮೂರು ಚಮಚ ತೆಂಗಿನೆಣ್ಣೆ ಹಾಕಿ ಬಿಸಿ ಮಾಡಿ.
*ಹಣ್ಣಿನ ತಿರುಳು ಇರುವ ಈ ಹೇರ್ ಮಾಸ್ಕ್ ಅನ್ನು ರಾತ್ರಿ ಕೂದಲಿಗೆ ಹಚ್ಚಿಕೊಂಡು ಶಾವರ್ ಕ್ಯಾಪ್ ಹಾಕಿ ಮಲಗಿ. ಇದು ರಾತ್ರಿಯಿಡಿ ನಿಮ್ಮ ಕೂದಲಿನ ಸಮಸ್ಯೆ ನಿವಾರಣೆ ಮಾಡುವುದು.
*ಮರುದಿನ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಇದರ ಬಳಿಕ ಶಾಂಪೂ ಹಾಕಿ ಕೂದಲು ತೊಳೆಯಿರಿ.