ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಸಾವಿನ ಬಗ್ಗೆ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಕೆ.ಎನ್‌. ಕೇಶವನಾರಾಯಣ ಆಯೋಗ, ಡಿಸೆಂಬರ್‌ ಕೊನೆ ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ರಾಜ್ಯ ಸರ್ಕಾರ 2016 ರ ಜುಲೈನಲ್ಲಿ ಆಯೋಗ ರಚನೆ ಮಾಡಿತ್ತು. 16 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿದೆ. ಗಣಪತಿ ಕುಟುಂಬ ಸದಸ್ಯರು, ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್‌) ವಿಜ್ಞಾನಿಗಳು ಸೇರಿ ಒಟ್ಟು 49 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 05-04-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಗಣಪತಿ ಬಳಸುತ್ತಿದ್ದ ಮೊಬೈಲ್ ಫೋನ್, ಸಾವಿಗೂ ಮುನ್ನ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದ ವಿಡಿಯೊ ದೃಶ್ಯಾವಳಿ, ಸಾವಿನ ಬಳಿಕ ಪೊಲೀಸರು ಮಾಡಿರುವ ವಿಡಿಯೊ ಚಿತ್ರೀಕರಣ, ಮಡಿಕೇರಿ ವಿನಾಯಕ ಲಾಡ್ಜ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳು ಮತ್ತು ಅದರ ಡಿವಿಆರ್ ಅನ್ನು ಆಯೋಗ ವಶಕ್ಕೆ ಪಡೆದಿದೆ. ಎಲ್ಲವನ್ನೂ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿ ಪ್ರತ್ಯೇಕವಾಗಿ ವರದಿ ಪಡೆದುಕೊಂಡಿದೆ.

ಇವೆಲ್ಲವನ್ನೂ ಕ್ರೂಢೀಕರಿಸಿ ಗಣಪತಿ ಅವರದು ಆತ್ಮಹತ್ಯೆಯೋ ಅಥವಾ ಬೇರೆ ಕಾರಣ ಇದೆಯೇ? ಎಂಬುದನ್ನು ಆಯೋಗ ಪರಾಮರ್ಶೆ ನಡೆಸುತ್ತಿದೆ. ಆತ್ಮಹತ್ಯೆ ಆಗಿದ್ದರೆ ಅದಕ್ಕೆ ಕಾರಣ ಏನು, ಯಾರ ಪ್ರಚೋದನೆಯಾದರೂ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು 43 ಕೊರೋನಾ ಪಾಸಿಟೀವ್.

‘ ಸದ್ಯ ಆಯೋಗ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನಿರ್ಧಾರಕ್ಕೆ ಬಂದ ಬಳಿಕ ವರದಿ ಸಿದ್ಧಪಡಿಸಿ ಡಿಸೆಂಬರ್ ಕೊನೆ ಅಥವಾ ಜನವರಿ ಮೊದಲ ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೇಶವನಾರಾಯಣ ತಿಳಿಸಿದರು.