ಕೆಲವು ತಿಂಗಳಿಂದ ಇಳಿಮುಖವಾಗಿದ್ದ ತರಕಾರಿ ಬೆಲೆ ಈಗ ಮತ್ತೆ ಏರುಮುಖಿಯಾಗಿದೆ. ಇದರಿಂದ ಮೊದಲೇ ಏರಿಕೆಯಲ್ಲಿರುವ ಹೊಟೇಲ್ ತಿಂಡಿಗಳ ದರ ಇನ್ನಷ್ಟು ಏರಲಿದೆ. ಮತ್ತೊಂದೆಡೆ, ಗ್ರಾಹಕನ ಜೇಬಿಗೆ ಹೊರೆಯಾಗುತ್ತಿದೆ. ಮಗದೊಂದೆಡೆ, ಸಾಮಾನ್ಯ ವರ್ಗದವರ ಬದುಕಿಗೆ ಬರೆ ಬೀಳುವಂತಾಗಿದೆ. ಒಟ್ಟಿನಲ್ಲಿ ಗ್ರಾಹಕ ಆತಂಕಿತನಾಗಿದ್ದಾನೆ.
ಅತಿ ಹೆಚ್ಚು ಬಳಸಲ್ಪಡುವ ಟೊಮೆಟೊ ಮತ್ತು ಈರುಳ್ಳಿ ಜನರ ಕೈಗೆ ಸಿಗದ ಮಟ್ಟಕ್ಕೆ ಏರಿಕೆಯಾಗುತ್ತಿವೆ. ತರಕಾರಿ ಹೊರತಾಗಿ ಬಡವರಿಗಾಗಲಿ, ಶ್ರೀಮಂತರಿಗಾಗಲಿ ದೈನಂದಿನ ಅಡುಗೆ, ತಿಂಡಿ ಇರುವುದಿಲ್ಲ. ಈಗ ಚಳಿಗಾಲ ಆರಂಭವಾಗುತ್ತಿದ್ದು, ಹೊಸ ತರಕಾರಿಗಳ ಆಗಮನವಾಗಬೇಕಿತ್ತು. ಆದರೆ ಕೆಲವು ಸೊಪ್ಪುಗಳನ್ನು ಹೊರತುಪಡಿಸಿದರೆ ಬೇರಾವ ತರಕಾರಿಯೂ ಇನ್ನೂ ಮಾರುಕಟ್ಟೆಗೆ ಕಾಲಿಟ್ಟಿಲ್ಲ. ಇದೇ ಸಮಯವನ್ನು ಬಳಸಿಕೊಂಡು ದಲ್ಲಾಳಿಗಳು ತರಕಾರಿ ದರ ಏರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಇನ್ನೊಂದೆಡೆ, ಅಕಾಲಿಕ ಮಳೆ ಬಿದ್ದುದದರಿಂದ ತರಕಾರಿ ಗಿಡಗಳಿಗೆ ಮತ್ತು ಬಳ್ಳಿಗಳಿಗೆ ತೀವ್ರ ತೊಂದರೆಯಾಗಿದೆ. ಇದರಿಂದ ಇಳುವರಿ ಕುಂಠಿತಗೊಂಡಿದೆ. ಪರಿಣಾಮವಾಗಿ ಮಾರುಕಟ್ಟೆಗೆ ಸಮರ್ಪಕ ಪೂರೈಕೆ ಆಗುತ್ತಿಲ್ಲ. ದರ ಏರಿಕೆಗೆ ಇದೂ ಸಹ ಒಂದು ಕಾರಣವಾಗಿದೆ. ಈ ವರ್ಷ ಮಳೆ ಆಗಾಗ ಬಿದ್ದುದದರಿಂದ ಹೆಚ್ಚಿನ ಕಾಲ ತರಕಾರಿ ಕಡಿಮೆ ದರದಲ್ಲೇ ಗ್ರಾಹಕರಿಗೆ ಲಭ್ಯವಾಗಿದೆ. ಆದರೆ 8-10 ದಿನದಿಂದ ಟೊಮೆಟೊ, ಈರುಳ್ಳಿ ದರ ಏರಿಕೆಯಾಗುತ್ತಲೇ ಇದೆ. ಇದರೊಡನೆ ಕೆಲವು ತರಕಾರಿಯ ದರವೂ ಹೆಚ್ಚಿದೆ. ಆದರ ಇವ್ಯಾವುವೂ ಅನಿವಾರ್ಯ ಬಳಕೆಯ ಪಟ್ಟಿಯಲ್ಲಿ ಇಲ್ಲದ ಕಾರಣ ಗ್ರಾಹಕರಿಗೆ ಅಷ್ಟೊಂದು ತೊಂದರೆ ಆಗುತ್ತಿಲ್ಲ.

RELATED ARTICLES  ಕುಮಟಾ ಕನ್ನಡ ಸಂಘದಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣಗೆ ಶ್ರದ್ಧಾಂಜಲಿ

ಹಾಪ್‌ಕಾಮ್ಸ್‌ನಲೂ ಇವುಗಳ ದರ ಏರಿಕೆಯಾಗಿದೆ. ಆದರೆ ಮಾರುಕಟ್ಟೆ ದರಕ್ಕಿಂತ 5-10 ರೂ. ಕಡಿಮೆಯಲ್ಲಿ ಲಭ್ಯವಾಗುತ್ತಿವೆ. ವಿಶೇಷವಾಗಿ ಶಿವಮೊಗ್ಗದಲ್ಲಿ ಹಾಪ್‌ಕಾಮ್ಸ್ ಪರಿಣಾಮ ತೀರಾ ಕಡಿಮೆ. ಏನಿದ್ದರೂ ಜನರು ಮಾರುಕಟ್ಟೆಗೆ ಜೋತುಬೀಳುತ್ತಾರೆ. ಎಷ್ಟೇ ದೂರವಿದ್ದರೂ ಗಾಂಧಿಬಜಾರ್‌ಗೆ ಬರುತ್ತಾರೆ. ಹಾಪ್‌ಕಾಮ್ಸ್ ತನ್ನ ಪ್ರಭಾವವನ್ನು ಜನರ ಮೇಲೆ ಬೀರುವಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲ. ಗುಣಮಟ್ಟದ ತರಕಾರಿ, ಹಣ್ಣುಗಳು ಅಲ್ಲಿ ಮಾರುಕಟ್ಟೆ ದರಕ್ಕಿಂತ ಸ್ವಲ್ಪ ಕಡಿಮೆ ದರದಲ್ಲಿ ಲಭ್ಯವಿದ್ದರೂ ಜನರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿದೆ. ಇನ್ನೂ ಸಾಕಷ್ಟು ಗ್ರಾಹಕರಿಗೆ ಹಾಪ್‌ಕಾಮ್ಸ್ ಸೌಲಭ್ಯ ಸಿಗುತ್ತಿಲ್ಲ. ಅಗತ್ಯ ಸ್ಥಳಗಳಲ್ಲಿ ಅಥವಾ ಪ್ರತಿ ಬಡಾವಣೆಯಲ್ಲಿ ಇದರ ಮಾರಾಟ ಕೇಂದ್ರ ಇದ್ದಿದ್ದರೆ ಅನುಕೂಲವಾಗುತ್ತಿತ್ತು.

RELATED ARTICLES  ಜಾಗತಿಕ ಸಂಸ್ಥೆಗಳೊಂದಿಗೆ ಪತಂಜಲಿ ಪಾಲುದಾರಿಕೆ ಇಲ್ಲ: ರಾಮ್ ದೇವ್

ಇದೇನೇ ಇರಲಿ, ತರಕಾರಿ ದರ ಏರಿಕೆ ಮತ್ತೆ ಗ್ರಾಹಕನಿಗೆ ಬರೆ ಹಾಕುತ್ತಿದೆ. ಸರಕಾರ ಈ ತರಕಾರಿಗಳ ರಫ್ತನ್ನು ಇಳಿಮುಖ ಮಾಡುವತ್ತ ಗಮನಹರಿಬೇಕೆಂದು ಹೋಲ್‌ಸೇಲ್ ವರ್ತಕರು ಆಗ್ರಹಿಸಿದ್ದಾರೆ. ಸದ್ಯದ ಮಾರುಕಟ್ಟೆ ದರವನ್ನು ಇಳಿಯುವಂತೆ ಮಾಡಿ, ನಿಗದಿತ ದರಕ್ಕೆ ಸಿಗುವಂತೆ ಮಾಡಬೇಕಿದೆ. ನಾಲ್ಕಾರು ದಿನದ ಹಿಂದೆ 25 ರೂ. ಇದ್ದ ಟೊಮೆಟೊ ಈಗ ದಿಢೀರ್ 60-65 ರೂ. ಗೆ ಏರಿದೆ. ಈರುಳ್ಳಿ ಸುಮಾರು 15 ದಿನದಿಂದಲೇ 40ರ ಆಜುಬಾಜಿನಲ್ಲಿತ್ತು. ಇವೆರಡೂ ದರ ಇಳಿಕೆಯಾದರೆ ಮಾತ್ರ ಗ್ರಾಹಕನಿಗೆ ನೆಮ್ಮದಿ. ಇಲ್ಲವಾದಲ್ಲಿ ಬಡವರ ದಿನನಿತ್ಯದ ಸಾರೂ ಸಹ ಅಡುಗೆಮನೆಯಲ್ಲಿ ತಯಾರಾಗುವುದು ನಿಂತುಹೋಗಲಿದೆ.