ಶಿರಸಿ: ನಿತ್ಯ ಹಲವಾರು ಪ್ರವಾಸಿಗರು ಬರುವ ತಾಲ್ಲೂಕಿನ ಸಹಸ್ರಲಿಂಗ ಪಡ್ಡೆ ಹುಡುಗರಿಗೆ ಸಮಯ ಕಳೆಯುವ ತಾಣವಾಗಿ ರೂಪುಗೊಳ್ಳುತ್ತಿದೆ. ಪವಿತ್ರ ಸ್ಥಳವಾಗಿರುವ ಇಲ್ಲಿ ಮೋಜು, ಮಸ್ತಿ ನಡೆಯುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಾಲ್ಲೂಕಿನ ಭೈರುಂಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಹಸ್ರಲಿಂಗ ನಿಸರ್ಗ ನಿರ್ಮಿತ ಸುಂದರ ತಾಣ. ಶಾಂತವಾಗಿ ಹರಿಯುವ ಶಾಲ್ಮಲಾ ನದಿಯ ನಡುವೆ ಇರುವ ಕಲ್ಲಿನ ಶಿವಲಿಂಗಗಳು ಇಲ್ಲಿನ ಪ್ರಮುಖ ಆಕರ್ಷಣೆ. ಅಲ್ಲಿಯೇ ಪಕ್ಕದಲ್ಲಿ ಇರುವ ತೂಗುಸೇತುವೆ ಪ್ರವಾಸಿಗರಿಗೆ ಖುಷಿಕೊಡುವ ಉಯ್ಯಾಲೆ. ಇದನ್ನು ನೋಡಲು ನಿತ್ಯ ಜಿಲ್ಲೆ, ಹೊರಜಿಲ್ಲೆಗಳಿಂದ ಕುಟುಂಬಸಮೇತರಾಗಿ ಪ್ರವಾಸಗರು ಬರುತ್ತಾರೆ.
‘ಇತ್ತೀಚಿನ ದಿನಗಳಲ್ಲಿ ಸಹಸ್ರಲಿಂಗ ದಲ್ಲಿ ಕಾಲೇಜು ಹುಡುಗರು, ಯುವ ಜೋಡಿಗಳು ಜೋರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜೆ ಹೊತ್ತಿನಲ್ಲಿ ಸಮಯ ಕಳೆಯಲು ಬರುವ ಯುವಕರು ನದಿಯ ದಡದಲ್ಲಿ ಕುಳಿತು ಹೆಂಡ ಕುಡಿದು ಕಾಡಿನ ಮರಗಳ ಕೆಳಗೆ, ಗಿಡಗಳ ಪೊದೆಯಲ್ಲಿ ಬಾಟಲಿ ಎಸೆದು ಹೋಗುತ್ತಾರೆ. ಇದರ ಅರಿವಿಲ್ಲದೇ ಕಾಡಿನಲ್ಲಿ ಕಾಲಿಟ್ಟರೆ ಬಾಟಲಿಯ ಒಡೆದು ಗಾಜು ಕಾಲಿಗೆ ಚುಚ್ಚುತ್ತದೆ. ಗುಟ್ಕಾ ಪ್ಯಾಕೆಟ್‌ಗಳು ನದಿ ತಟದಲ್ಲಿ ಮಾಲಿನ್ಯ ಸೃಷ್ಟಿಸಿವೆ’ ಎನ್ನುತ್ತಾರೆ ಸ್ಥಳೀಯರು.
‘ಸಹಸ್ರಲಿಂಗ ನಿರ್ವಹಣೆ ಭೈರುಂಬೆ ಗ್ರಾಮ ಪಂಚಾಯ್ತಿ ಜವಾಬ್ದಾರಿಯಾಗಿದೆ. ವಾಹನ ನಿಲುಗಡೆ, ಹೋಟೆಲ್‌ನಿಂದ ಪಂಚಾಯ್ತಿಗೆ ಆದಾಯ ಬರುತ್ತದೆ. ಇವನ್ನು ಬಳಸಿಕೊಂಡು ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ರಾಜ್ಯ ಪ್ರಸಿದ್ಧ ಪ್ರವಾಸಿ ತಾಣದ ಸುಂದರ ಪರಿಸರವನ್ನು ಕಾಪಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.
ಈ ಕುರಿತು ಭೈರುಂಬೆ ಪಂಚಾಯ್ತಿ ಅಧ್ಯಕ್ಷೆ ಜಯಾ ನಾಯ್ಕ ಅವರನ್ನು ಸಂಪರ್ಕಿಸಿದಾಗ, ‘ಪ್ರವಾಸೋದ್ಯಮ ಇಲಾಖೆಯಿಂದ ಸಹಸ್ರಲಿಂಗದಲ್ಲಿ ಒಬ್ಬರು ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಆದರೆ ಇದು ಸಾಕಾಗುತ್ತಿಲ್ಲ. ವಾರಕ್ಕೆ 2–3 ದಿನ ಈ ಭಾಗದಲ್ಲಿ ಸಂಚರಿಸುವಂತೆ ಪೊಲೀಸ್ ಇಲಾಖೆಗೆ ಈ ಹಿಂದೆಯೇ ವಿನಂತಿಸಿಕೊಳ್ಳಲಾಗಿತ್ತು’ ಎಂದರು. ಹೋಟೆಲ್ ಅನ್ನು ಮೂರು ವರ್ಷದ ಅವಧಿಗೆ ಟೆಂಡರ್ ನೀಡಲಾಗಿದೆ. ಅವರು ಅಲ್ಲಿ ಸುತ್ತಮುತ್ತಲಿನ ಸ್ವಚ್ಛತೆ ನಿರ್ವಹಣೆ ಮಾಡುತ್ತಾರೆ ಎಂದರು.