ನವದೆಹಲಿ: ಆತಂಕ ಸೃಷ್ಟಿಸಿರುವ ಡೆಂಗಿ ಜ್ವರಕ್ಕೆ 2019ರ ಒಳಗಾಗಿ ಭಾರತದಲ್ಲಿ ಲಸಿಕೆ ದೊರೆಯಲಿದೆ ಎಂದು ಔಷಧ ತಯಾರಿಕಾ ಸಂಸ್ಥೆ ಪನಾಸಿಯಾ ಬಯೋಟೆಕ್‌ ತಿಳಿಸಿದೆ.

2018ರಿಂದ ಮಾನವರ ಮೇಲೆ ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆ ನಡೆಸಲು ಭಾರತೀಯ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ)ಯಿಂದ ಅನುಮತಿ ಪಡೆಯಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಸೊಳ್ಳೆಗಳಿಂದ ಹರಡುವ ಡೆಂಗಿಯಿಂದಾಗಿ ಭಾರತದಲ್ಲಿ ಈ ವರ್ಷ ಕನಿಷ್ಠ 216 ಜನ ಸಾವಿಗೀಡಾಗಿದ್ದಾರೆ. ರೋಗದಿಂದ ಉಂಟಾಗುವ ಸಾವಿನ ಪ್ರಮಾಣವನ್ನು ನಿಯಂತ್ರಿಸುವುದು ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುವುದು ಅತ್ಯಗತ್ಯವಾಗಿದೆ.

‘ಡೆಂಗಿ ಭಾರತಕ್ಕೆ ಒಂದು ದೊಡ್ಡ ಸವಾಲಾಗಿದ್ದು, ಲಸಿಕೆ ಅಗತ್ಯವಾಗಿ ಬೇಕಾಗಿದೆ. ಹೀಗಾಗಿ ನಾವು ತಂತ್ರಜ್ಞಾನ ಅಭಿವೃದ್ಧಿ ಮಂಡಳಿ(ಟಿಡಿಬಿ) ಮತ್ತು ಪನಾಸಿಯಾ ಬಯೋಟೆಕ್‌ ಜತೆಯಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದೇವೆ’ ಎಂದು ಡಿಸಿಜಿಐನ ಜಿ.ಎನ್.ಸಿಂಗ್‌ ಮಾಹಿತಿ ನೀಡಿದ್ದಾರೆ.

ತ್ವರಿತಗತಿಯಲ್ಲಿ ಪ್ರಯೋಗಗಳು ನಡೆಯುತ್ತಿದ್ದು, ಡೆಂಗಿ ನಿಯಂತ್ರಕ ಲಸಿಕೆ ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮ ಹಾಗೂ ಸುರಕ್ಷತೆಯ ಕುರಿತು ಖಾತರಿ ಪಡಿಸುತ್ತೇವೆ ಎಂದಿದ್ದಾರೆ.

RELATED ARTICLES  ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣ ಜಪ್ತು ಮಾಡಿ, ಬಾಲಚಂದ್ರ ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ಗುಜರಾತ್ ನವಸಾರೆ ಸಂಸದ ಚಂದ್ರಕಾಂತ ಪಾಟೀಲ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಭಾಗವಾಗಿರುವ ಟಿಡಿಬಿ ಹಾಗೂ ಪನಾಸಿಯಾ ಬಯೊಟೆಕ್ ಸಂಸ್ಥೆಗಳು ಲಸಿಕೆ ಅಭಿವೃದ್ಧಿ ಪಡಿಸಲು ಜಂಟಿಯಾಗಿ ₹28.99 ಕೋಟಿ ಹಣ ಹೂಡಿವೆ.

ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ(ಎನ್‌ಐಎಚ್‌) ಸಹಯೋಗದಲ್ಲಿ ಪಾನಾಸಿಯ ಬಯೋಟೆಕ್‌ ಸುಧಾರಿತ ಡೆಂಗಿ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿದೆ. ಡೆಂಗಿಗೆ ಕಾರಣವಾಗುವ ನಾಲ್ಕು ಭಿನ್ನ ವೈರಸ್‌ಗಳಿಂದ ದೇಹಕ್ಕೆ ಪ್ರತಿರಕ್ಷಣೆ ಒದಗಿಸಲಿದೆ ಎಂಬುದು ಪ್ರಾಯೋಗಿಕ ಪರೀಕ್ಷೆಯಿಂದ ಸಾಬೀತಾಗಿದೆ.

ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಕೆಲವು ಲಸಿಕೆಗಳನ್ನು 2–3 ಡೋಸ್‌(ಪ್ರಮಾಣ) ಪಡೆದರೆ ಮಾತ್ರವೇ ರೋಗದ ವಿರುದ್ಧ ಪ್ರತಿರಕ್ಷಣೆ ಒದಗಿಸಲು ಶಕ್ತವಾಗಿರುತ್ತವೆ. ವೈದ್ಯಕೀಯ ದತ್ತಾಂಶವೊಂದರ ಪ್ರಕಾರ ಭಾರತದ ಹೊರ ಭಾಗಗಳಲ್ಲಿ ಡೆಂಗಿಯ ಟೈಪ್‌–2 ವೈರಸ್‌ ವಿರುದ್ಧ ಕೆಲವು ಲಸಿಕೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಿಲ್ಲ. ಜತೆಗೆ ಲಸಿಕೆಯನ್ನು ಮೂರು ಡೋಸ್‌(ಪ್ರಮಾಣ)ನಷ್ಟು ಬಳಸಿದರೂ 9-45 ವರ್ಷ ವಯಸ್ಸಿನವರಲ್ಲಿ ಮಾತ್ರವೇ ಪರಿಣಾಮಕಾರಿಯಾಗಿದೆ.

RELATED ARTICLES  ಉತ್ತರಕನ್ನಡದಲ್ಲಿ ಒಂದೇ ದಿನ 616 ಕೊರೋನಾ ಕೇಸ್.

ಡೆಂಗಿಗೆ ಕಾರಣವಾಗುವ ಎಲ್ಲ ನಾಲ್ಕು ವೈರಸ್‌ಗಳ ವಿರುದ್ಧ ಒಂದೇ ಡೋಸ್‌ನಲ್ಲಿ ಪರಿಣಾಮ ಬೀರುವ ಲಸಿಕೆ ಅಭಿವೃದ್ಧಿ ಪ್ರಮುಖ ಸಂಶೋಧನೆಯಾಗಿದೆ ಎಂದು ಪಾನಾಸಿಯ ಬಯೋಟೆಕ್‌ ಜೆಎಂಡಿ ರಾಜೇಶ್‌ ಜೈನ್‌ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಾದ್ಯಂತ 2016ರಲ್ಲಿ ಒಟ್ಟು 1,29,166 ಮತ್ತು 2015 ರಲ್ಲಿ 99,913 ಡೆಂಗಿ ಪ್ರಕರಣಗಳು ದಾಖಲಾಗಿದ್ದವು. ಆರೋಗ್ಯ ಇಲಾಖೆಯಿಂದ ದೊರೆತಿರುವ ಅಂಕಿ ಅಂಶಗಳ(ನವೆಂಬರ್‌ 19 ರವರೆಗೆ) ಪ್ರಕಾರ, ಈ ವರ್ಷ ಒಟ್ಟು 1,40,910 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 216 ಮಂದಿ ಸಾವಿಗೀಡಾಗಿದ್ದಾರೆ.

ತಮಿಳುನಾಡು (20,141), ಕೇರಳ (19,543), ಕರ್ನಾಟಕ (15,570), ಪಂಜಾಬ್ (14,049), ಪಶ್ಚಿಮ ಬಂಗಾಳ (10,697) ಮತ್ತು ದೆಹಲಿಯಲ್ಲಿ (8,549) ಹೆಚ್ಚು ಪ್ರಕರಣಗಳು ದಾಖಲಾಗಿವೆ.

ರೋಗ ಗುಣಪಡಿಸುವ ಯಾವುದೇ ಔಷದ ಲಭ್ಯವಿಲ್ಲದಿರುವುದರಿಂದಾಗಿ ಕೇವಲ ನಿಯಂತ್ರಕ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.