ಕರ್ನಾಟಕ ರಾಜ್ಯ ಸರಕಾರಿ ಶಾಲಾ ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ರವೀಂದ್ರ ಭಟ್ಟ ಸೂರಿ ಇವರು ನಿನ್ನೆ ಬೆಂಗಳೂರಿನಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ನೆಲೆಸಿರುವ ಕರ್ಕಿ ಮೂಲದ ಪಾಂಡಿತ್ಯ ಶ್ರೇಷ್ಠ “ಸೂರಿ” ಕುಟುಂಬದ ಶ್ರೀ ಕೃಷ್ಣ ಭಟ್ಟ ಮತ್ತು ಶ್ರೀಮತಿ ಸೀತಾಬಾಯಿ ದಂಪತಿಯ ಮಗನಾದ ಶ್ರೀ ರವೀಂದ್ರ ಭಟ್ಟ ಸೂರಿ ಅವರು ಬಿ.ಪಿ.ಎಡ್. ಹಾಗೂ ಎಂ.ಕಾಂ.ಪದವಿ ಪಡೆದು ಕಳೆದ ೨೦ ವರ್ಷಗಳಿಂದ ಸರಕಾರೀ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಜನ ಮೆಚ್ಚಿದ ಶಿಕ್ಷಕರಾಗಿದ್ದಾರೆ.

RELATED ARTICLES  ಶಿಸ್ತು ಶಾಸನಬದ್ಧ ಶ್ರೇಷ್ಠ ಶರಣ –ಮಡಿವಾಳ ಮಾಚಯ್ಯ

FB IMG 1511591134432

ತಮ್ಮ ಈ ಶಿಕ್ಷಕ ವೃತ್ತಿ ನಿಷ್ಠೆಯ ಜೊತೆಗೆ ಸಾಮಾಜಿಕ,ಸಾಂಸ್ಕೃತಿಕ,ಧಾರ್ಮಿಕ ಸೇವಾ ಕ್ಷೇತ್ರಗಳಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ದಣಿವರಿಯದ ಸದಾ ನಗುಮೊಗದ ಕ್ರಿಯಾಶೀಲ ಸಂಪನ್ನ ವ್ಯಕ್ತಿ ಇವರಾಗಿದ್ದಾರೆ.

ಕಳೆದೊಂದು ವರ್ಷದಿಂದ ಕುಮಟಾ ತಾಲೂಕಾ ಸರಕಾರೀ ನೌಕರರ ಸಂಘದ ಅಧ್ಯಕ್ಷರಾಗಿಯೂ ಸಕ್ರಿಯರಾಗಿರುವುದರ ಜೊತೆಗೆ ಉ.ಕ.ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷರೂ ಆಗಿದ್ದು , ಹಲವಾರು ಸಾಮಾಜಿಕ,ಸಾಹಿತ್ಯಿಕ,ಧಾರ್ಮಿಕ ಸಂಘಟನೆಗಳಲ್ಲೂ ಸಕ್ರಿಯರಾಗಿರುವ ಉತ್ತಮ ಸಂಘಟಕರೂ ಇವರಾಗಿದ್ದಾರೆ.

ರವೀಂದ್ರ ಭಟ್ಟ ಸೂರಿ ಅಂದಾಕ್ಷಣ ನಮ್ಮ ಕರಾವಳಿಗರಿಗೆ ನೆನಪಾಗುವುದು ಇವರ ಅಪ್ರತಿಮ ಕಾರ್ಯಕ್ರಮ ನಿರೂಪಣಾ ಶೈಲಿ.ಇವರೊಬ್ಬ ಉತ್ತಮ ವಾಗ್ಮಿ.ರಾಜ್ಯಾದ್ಯಂತ ೧೦೦೦ ಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ ಗೈದು ಸೈ ಎನಿಸಿಕೊಂಡಿರುವ ಜೊತೆಗೆ ಕನ್ನಡ ಸಾರಸ್ವತ ಲೋಕಕ್ಕೆ ಪ್ರಪ್ರಥಮವಾಗಿ ಕಾರ್ಯಕ್ರಮ “ನಿರೂಪಣೆ”ಯ ಕೃತಿಯೊಂದನ್ನೂ ನೀಡಿದ ಹೆಗ್ಗಳಿಕೆಯೂ ಇವರದ್ದಾಗಿದೆ.”ನಡೆಯಲೊಂದು ನುಡಿ” ಹಾಗೂ “ಭಾವ ಜೀವಿ” ಇವು ಇವರ ಇತರ ಪ್ರಕಟಿತ ಕೃತಿಗಳಾಗಿವೆ.

RELATED ARTICLES  ರಾಷ್ಟ್ರಮಟ್ಟಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶ್ರೀಭಾರತೀ ವಿದ್ಯಾಲಯದ ಬಾಲೆಯರು.

ತನ್ನೆಲ್ಲ ಈ ಸೇವಾ ಕಾರ್ಯಚಟುವಟಿಕೆಗಳಲ್ಲಿ ಶ್ರೀ ಗುರುಗಳ ಕೃಪಾಶೀರ್ವಾದ,ಕುಟುಂಬದವರ ಸಹಕಾರ,ಸ್ನೇಹಿತರೆಲ್ಲರ ಪ್ರೋತ್ಸಾಹಗಳನ್ನು ಸದಾ ಸ್ಮರಿಸುವ ರವೀಂದ್ರ ಭಟ್ಟ ರವರು ರಾಜ್ಯಮಟ್ಟದ ಜವಾಬ್ದಾರಿ ವಹಿಸಿಕೊಂಡ ಈ ಸಂದರ್ಭದಲ್ಲಿ ಶ್ರೀಯುತರನ್ನು ಹಾರ್ದಿಕವಾಗಿ ಅಭಿನಂದಿಸುತ್ತಾ,ಇವರ ಕರ್ತೃತ್ವ ಶಕ್ತಿಗೆ ರಾಜ್ಯ ರಾಷ್ಟ್ರ ಮಟ್ಟದ ಇನ್ನೂ ಹೆಚ್ಚಿನ ಜವಾಬ್ದಾರಿ ಸ್ಥಾನಗಳು,ಪ್ರಶಸ್ತಿಗಳು ಲಭಿಸಲೆಂದು ‘ಸತ್ವಾಧಾರಾ ನ್ಯೂಸ್’ ಗೌರವದಿಂದ ಶುಭ ಹಾರೈಸುತ್ತಿದೆ.

ವ್ಯಕ್ತಿ ವಿಶೇಷ ಪರಿಚಯ ಲೇಖನ :
ಶ್ರೀ ಜಯದೇವ ಬಳಗಂಡಿ .ಕುಮಟಾ.