ಕುಮಟಾ : ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಎಲ್.ಪಿ.ಜಿ. ಗ್ಯಾಸ್ ವಿತರಿಸುವುದರೊಂದಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಗ್ಯಾಸ್ ಲೈಟರಗಳನ್ನು ಸಹ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜಿಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ತಾಯಂದಿರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದು ಬಡವರಿಗೆ ಉಚಿತವಾಗಿ ಎಲ್.ಪಿ.ಜಿ. ಗ್ಯಾಸ್ ಸಂಪರ್ಕದ ಭಾಗ್ಯ ಕಲ್ಪಿಸುತ್ತಿದೆ. ಈ ಯೋಜನೆ ಬಡವರಿಗೆ ತಲುಪಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಫಲಾನುಭವಿಗಳು ಶ್ರಮವಿಲ್ಲದೇ, ಹಣ ವ್ಯಯಿಸದೇ ಎಲ್ಪಿಜಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳುವಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಅರ್ಹ ಫಲಾನುಭವಿಗಳಿಗೆ ಈ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳುವಲ್ಲಿ ಅನಾನುಕೂಲತೆ ಉಂಟಾದಲ್ಲಿ ತಮ್ಮನ್ನು ಸಂಪರ್ಕಿಸಿದರೆ ತಾವು ಸಂಪೂರ್ಣ ಸಹಕಾರ ನೀಡುತ್ತೇವೆ. ತಾವು ಜಾತಿ ಧರ್ಮ ಪಕ್ಷಭೇದ ತೋರದೇ ಎಲ್ಲರಿಗೂ ಈ ಯೋಜನೆಯ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ಜನರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳಲ್ಲಿ ರಾಜಕೀಯ ತೋರಬಾರದು. ಈ ಭಾಗದಲ್ಲಿ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗಿ ತೀರಾ ತೊಂದರೆ ಉಂಟಾಗುತ್ತಿದ್ದು ಇದುವರೆಗೂ ಯಾವುದೇ ಜನಪ್ರತಿನಿಧಿಗಳೂ ಗಮನ ಹರಿಸದೇ ಇರುವುದು ವಿಪರ್ಯಾಸ. ತಾವೆಲ್ಲರೂ ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ನೀಡಿ ಗೆಲ್ಲಿಸಿದ್ದೇ ಆದಲ್ಲಿ ಈ ಭಾಗದಲ್ಲಿನ ಸಮಸ್ಯೆಯ ನಿವಾರಣೆಯೊಂದಿಗೆ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ನಾಮಧಾರಿ ಸಂಘದ ಅಧ್ಯಕ್ಷರೂ ಆಗಿರುವ ಶ್ರೀನಿವಾಸ ನಾಯ್ಕ ಅವರು ಮಾತನಾಡಿ ನಾಗರಾಜ ನಾಯಕ ತೊರ್ಕೆ ಅವರು ಓರ್ವ ಸಹೃದಯಿ ವ್ಯಕ್ತಿಯಾಗಿದ್ದಾರೆ. ನಿವೃತ್ತಿಯ ಬಳಿಕವೂ ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಸವೆಸುತ್ತಿದ್ದಾರೆ. ಇವರು ಈಗಾಗಲೇ ತಮ್ಮ ಟ್ರಸ್ಟ್ ಮೂಲಕ ಹತ್ತಾರು ಅಭಿವೃದ್ಧಿಪರ ಹಾಗೂ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಕೈಗೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಇಂತಹ ಸಾಮಾಜಿಕ ಕಳಕಳಿಯ ನಿಃಸ್ವಾರ್ಥ ಮನೋಭಾವನೆಯುಳ್ಳ ವ್ಯಕ್ತಿಯ ಅಗತ್ಯವಿದೆ. ರಾಜಕೀಯ ಅಧಿಕಾರ ದೊರೆತಲ್ಲಿ ನಾಗರಾಜ ನಾಯಕ ತೊರ್ಕೆಯವರಿಂದ ಹೆಚ್ಚಿನ ಪ್ರಗತಿಪರ ಕೆಲಸಗಳು ಜರುಗಲಿವೆ. ಹಾಗಾಗಿ ಜನರು ಇಂತಹ ವ್ಯಕ್ತಿಗಳಿಗೆ ಸಹಾಯ ಸಹಕಾರಗಳನ್ನು ನೀಡಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ದೇವಣ್ಣ ನಾಯಕ, ವೆಂಕಟ್ರಮಣ ಕವರಿ, ಪ್ರಭಾಕರ ತಾಂಡೇಲ, ಪಾಂಡುರಂಗ ನಾಯಕ, ಸೋಮು ಗೌಡ, ಗೋಪಾಲ ಗೌಡ, ಲಕ್ಷ್ಮೀಕಾಂತ ಎನ್. ತಾಂಡೇಲ, ರಾಮಾ ಗೌಡ, ದಯಾನಂದ ನಾಯಕ, ಗಣೇಶ ಪಂಡಿತ, ದತ್ತಾ ನಾಯ್ಕ, ಚಂದ್ರಶೇಖರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಉಚಿತ ಗ್ಯಾಸ ಕಿಟ್ ಗಳನ್ನು ಪಡೆದ ಫಲಾನುಭವಿಗಳ ಸಂತಸ ಧನ್ಯತಾಭಾವ ಮೂಡಿಸಿತು.