ಉಡುಪಿ: ‘ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯವನ್ನು ಬಹುಸಂಖ್ಯಾತರಿಗೂ ವಿಸ್ತರಿಸಬೇಕು ಎಂದು ಹೇಳಿದ್ದೇನೆಯೇ ಹೊರತು, ಸಂವಿಧಾನ ಬದಲಾಯಿಸಿ ಅಥವಾ ಮೀಸಲಾತಿ ನಿಲ್ಲಿಸಿ ಎಂದು ಹೇಳಿಲ್ಲ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸವಲತ್ತನ್ನು ವಿಸ್ತರಣೆ ಮಾಡಿದರೆ ಬಹುಸಂಖ್ಯಾತರಾಗಿರುವ ದಲಿತರು ಹಾಗೂ ಹಿಂದುಳಿದ ವರ್ಗದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಸೌಲಭ್ಯ ಸಿಗಲಿದೆ. ಚರ್ಚ್ ಮತ್ತು ಮಸೀದಿಗೆ ಇರುವ ಸ್ವಾಯತ್ತತೆ ಮಂದಿರಗಳಿಗೂ ದೊರೆಯುತ್ತದೆ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವುದು ಬೇಡ ಎಲ್ಲರನ್ನೂ ಸಮಾನಾವಾಗಿ ನೋಡಬೇಕು ಎಂಬುದಷ್ಟೇ ನನ್ನ ಆಶಯ. ಇದನ್ನು ಅರ್ಥ ಮಾಡಿಕೊಳ್ಳದೆ ಕೆಲವು ಸಾಹಿತಿಗಳು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು ವಿಷಾದನೀಯ’ ಎಂದರು.