ನವದೆಹಲಿ: ನೋಟು ರದ್ದತಿಯ ನಂತರ ಬ್ಯಾಂಕ್ ಖಾತೆಗಳಲ್ಲಿ ₹25 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಳೆಯ ನೋಟುಗಳನ್ನು ಜಮಾ ಮಾಡಿದ 1.16 ಲಕ್ಷ ವ್ಯಕ್ತಿಗಳು ಮತ್ತು ಕಂಪೆನಿಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಇಷ್ಟೊಂದು ದೊಡ್ಡ ಮೊತ್ತದ ಹಣಕಾಸು ವಹಿವಾಟು ನಡೆಸಿಯೂ ಇದುವರೆಗೆ ಇವರಾರೂ ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐ.ಟಿ ರಿಟರ್ನ್ಸ್) ಸಲ್ಲಿಸಿರಲಿಲ್ಲ.
ಆದಾಯ ತೆರಿಗೆ ಕಾನೂನು ಉಲ್ಲಂಘನೆ ಆರೋಪದ ಮೇಲೆ ಐ.ಟಿ ಕಾಯಿದೆ ಸೆಕ್ಷನ್ 142(1)ರ ಅಡಿ ನೊಟೀಸ್ ನೀಡಲಾಗಿದ್ದು, ರಿಟರ್ನ್ಸ್ ಸಲ್ಲಿಸಲು ಒಂದು ತಿಂಗಳ ಗಡುವು ನೀಡಲಾಗಿದೆ. ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ ಸಲ್ಲಿಸಿದ ಕೆಲವು ಶಂಕಿತ ವಹಿವಾಟಗಳ ಮೇಲೂ ನಿಗಾ ಇಡಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ಮಂಗಳವಾರ ತಿಳಿಸಿದ್ದಾರೆ.
ನೋಟು ರದ್ದತಿಯ ನಂತರ ಅಂದಾಜು 18 ಲಕ್ಷ ಮಂದಿ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದ್ದಾರೆ. ಆ ಪೈಕಿ ಪ್ರತಿಯೊಬ್ಬರು ಕನಿಷ್ಠ ₹2.50 ಲಕ್ಷಕ್ಕೂ ಹೆಚ್ಚಿನ ಮೊತ್ತದ ನೋಟುಗಳನ್ನು ಜಮಾ ಮಾಡಿದ್ದಾರೆ.
ಆದಾಯ ತೆರಿಗೆ ಇಲಾಖೆಗೆ ಇದುವರೆಗೂ ಲೆಕ್ಕಪತ್ರ ಮಾಹಿತಿ ಸಲ್ಲಿಸದವರನ್ನು ಎರಡು ವಿಭಾಗಗಳಲ್ಲಿ ಪ್ರತ್ಯೇಕಿಸಿದೆ. ₹25 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಠೇವಣಿ ಮಾಡಿದವರು ಮತ್ತು ₹10 ರಿಂದ 25 ಲಕ್ಷ ಠೇವಣಿ ಮಾಡಿದವರು ಎಂದು ವಿಂಗಡಿಸಲಾಗಿದೆ.
ಬ್ಯಾಂಕ್ ಖಾತೆಗಳಲ್ಲಿ ₹10ರಿಂದ ₹25 ಲಕ್ಷ ಹಣ ಜಮಾ ಮಾಡಿದ 2.4 ಲಕ್ಷ ಜನರು ಇದುವರೆಗೂ ರಿಟರ್ನ್ಸ್ ಸಲ್ಲಿಸಿಲ್ಲ. ಎರಡನೇ ಹಂತದಲ್ಲಿ ಇವರಿಗೆಲ್ಲ ನೋಟಿಸ್ ಜಾರಿ ಮಾಡಲಾಗುವುದು ಎಂದು ಚಂದ್ರ ತಿಳಿಸಿದರು.