ಕಾರವಾರ: ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಅಂಗವಿಕಲರನ್ನು ಕಡೆಗಣಿಸಿ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ, ಎಂದು ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿಕಲಚೇತನರು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅಂಗವಿಕಲರ ಬಗ್ಗೆ ಪ್ರಸ್ತಾಪಿಸದೆ ಸರ್ಕಾರ ಅಧಿವೇಶನ ಮುಗಿಸಿದೆ. ಈ ಮೂಲಕ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಳೆದ ಐದು ವರ್ಷಗಳಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಇಲ್ಲಿ ಅಂಗವಿಕಲರ ಅಂಗಗಳು ಮಾತ್ರ ಅಂಗವಿಕಲವಾಗಿಲ್ಲ. ಅವರ ಬದುಕನ್ನೂ ಸಹ ಅಂಗವಿಕಲವನ್ನಾಗಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

RELATED ARTICLES  ನಿಧಿಶ್ರೀಗೆ “ಭಾರತೀಯ ಕಲಾಸಿದ್ಧಿ” ಪ್ರಶಸ್ತಿ

ಅಂಗವಿಕಲತೆಯನ್ನು ಎದುರಿಸಿ ಪದವೀಧರರಾಗಿ, ವಿವಿಧ ತರಬೇತಿಯನ್ನು ಪಡೆದರುವವರಿಗೆ ವಿವಿಧ ನೆಪ ಹೇಳಿ ಉದ್ಯೋಗ ನಿರಾಕರಿಸಲಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಕಳೆದ 40 ವರ್ಷಗಳಿಂದ ಶೇ.3 ಮೀಸಲಾತಿ ಇದ್ದರೂ ಸಹ ಈವರೆಗೂ ಶೇ.0.4 ರಷ್ಟಕ್ಕಿಂತ ಕಡಿಮೆಯನ್ನು ಮಾತ್ರ ನೀಡಲಾಗಿದೆ ಹೀಗಾಗಿ ಇದರಿಂದ ಅಂಗವಿಕಲರು ಶಿಕ್ಷಣದಿಂದಲೂ ವಂಚನೆಯಾಗುತ್ತಿದ್ದಾರೆ ಎಂದು ಆರೋಪಿಸಿದರು.

RELATED ARTICLES  ಅಪೂರ್ಣವಾಗಿದೆ ಗಂಗಾವಳಿ ಸೇತುವೆ ಕಾಮಗಾರಿ : ಗ್ರಾಮಸ್ಥರ ಆಕ್ಷೇಪ.

ಅಂಗವಿಕಲರ ಹಕ್ಕುಗಳಿಗಾಗಿ ಹೊಸ ಕಾಯಿದೆಯನ್ನು ಜಾರಿಗೊಳಿಸಬೇಕು. ಅವರ ಮಾಸಾಶನದಲ್ಲಿ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ ರಾಜ್ಯದ ಎಲ್ಲ ಅಂಗವಿಕಲರು ಹಾಗೂ ಅಂಗವಿಕಲ ಸಂಸ್ಥೆಗಳು ಒಗ್ಗಟ್ಟಿನಿಂದ ದೊಡ್ಡ ಚಳುವಳಿಯನ್ನು ಹಮ್ಮಿಕೊಂಡು ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.