ಕುಮಟಾ: ಇಲ್ಲಿಯ ಕಡ್ಲೆಯ ಗಾಂಧಿವನದಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ವಿಶೇಷವಾಗಿ ಸಾಧನೆಯ ಹಾದಿಯಲ್ಲಿರುವ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಯುನಿವರ್ಸಿಟಿ ಬ್ಲೂ ಅನಿಸಿಕೊಂಡ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಕುಮಾರಿ ಸ್ವಾತಿ ರಾಯೇಶ್ವರ ಪೈ ಮತ್ತು ಕುಮಾರ ಶ್ರೀಧರ ಶೇಷಗಿರಿ ಶಾನಭಾಗ ಅವರು ಜಂಟಿಯಾಗಿ 100 ಮೀ. ಓಟಕ್ಕೆ ಚಾಲನೆ ನೀಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಸ್ವಾತಿ ಪೈ ಸಿದ್ಧತೆಯ ಘಟ್ಟದಲ್ಲಿ ನಿರಂತರ ಸೋಲು ಕಂಡರೂ ಧೃತಿಗೆಡದೇ ಸತತ ಪ್ರಯತ್ನಿಸಿದರೆ ಯಶಸ್ಸು ಶತಸಿದ್ಧ ಎಂದರು. ಪಾಲಕ-ಪೋಷಕರ ಪ್ರೋತ್ಸಾಹ ಮತ್ತು ಯೋಗ್ಯ ಕೋಚ್ ಸಿಕ್ಕರೆ ಗರಿಷ್ಠ ಸಾಧನೆ ಸಾಧ್ಯವೆಂದು ಶ್ರೀಧರ ನುಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು ಸಾಧನಾಪಥದಲ್ಲಿರುವ ಚಿತ್ರಿಗಿಯ ಈಜು ಪ್ರತಿಭೆಗಳಿಗೆ ಕ್ರೀಡಾಕೂಟ ಉದ್ಘಾಟಿಸುವ ಗೌರವ ಕಲ್ಪಿಸಿ ಪ್ರೋತ್ಸಾಹಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಕಾರ್ಯ ಇದಾಗಿದೆ ಎಂದರಲ್ಲದೇ ಏಷ್ಯಾಡ್ ಮತ್ತು ಒಲಿಂಪಿಕ್ ಗಳಲ್ಲಿ ಪಾಲ್ಗೊಳ್ಳುವ ಈ ಕಿರಿಯರ ಕನಸು ನನಸಾಗಲೆಂದು ಹಾರೈಸಿದರು. ಶಿಕ್ಷಕ ಕಿರಣ ಪ್ರಭು ಸ್ವಾಗತಿಸಿದರು. ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ ಪ್ರತಿಜ್ಞಾ ವಿಧಿ ಬೋಧಿಸಿ ಕ್ರೀಡಾ ಚಟುವಟಿಕೆಗಳನ್ನು ಸಂಯೋಜಿಸಿದರು. ಎಲ್ಲ ಸಹಶಿಕ್ಷಕರು ಕ್ರೀಡಾ ಆಯೋಜನೆಯಲ್ಲಿ ಸಹಕರಿಸಿದರು. ಹಿರಿಯ ಬಾಲಕಿಯರ ವಿಭಾಗದಲ್ಲಿ ತನುಜಾ ದಾಮೋದರ ಗೌಡ ಬಾಲಕರ ವಿಭಾಗದಲ್ಲಿ ರವೀಂದ್ರ ನಾಗೇಶ ಹರಿಕಂತ್ರ ವೀರಾಗ್ರಣಿಗಳಾದರೆ, ಕಿರಿಯ ಬಾಲಕಿಯರ ವಿಭಾಗದಲ್ಲಿ ಶ್ರೀ ರಶ್ಮೀ ಮಾಹಾದೇವ ಭಟ್ಟ ಮತ್ತು ಬಾಲಕರ ವಿಭಾಗದಲ್ಲಿ ಸಚಿನ್ ಡೆನಿಸ್ ಫರ್ನಾಂಡಿಸ್ ವೀರಾಗ್ರಣಿಗಳಾಗಿ ಹೊರಹೊಮ್ಮಿದರು.
ಅಪರಾಹ್ನ ಪಾಲಕರ ಕ್ರೀಡೋತ್ಸವ ನಡೆದು ವಿದ್ಯಾರ್ಥಿವೃಂದದವರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ಸಂದರ್ಭದಲ್ಲಿ ಕುಮಾರಿ ಸ್ವಾತಿ ರಾಯೇಶ್ವರ ಪೈ ಹಾಗೂ ಕುಮಾರ ಶ್ರೀಧರ ಶಾನಭಾಗ ಅವರನ್ನು ವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.