ಶಿರಸಿ: ನಗರದ ಪಂಚವಟಿ ಹೊಟೇಲ್ ಸಭಾ ಭವನದಲ್ಲಿ ಕೆಪಿಸಿಸಿ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಜರುಗಿತು. 9 ಜಿಲ್ಲೆಯ ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಎಐಸಿಸಿ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕಂ ಠಾಕೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಂಘಟನೆ, ಮನೆ- ಮನೆ ಕಾಂಗ್ರೆಸ್, ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುವುದು ಸೇರಿದಂತೆ ಪಕ್ಷದ ಬೆಳವಣಿಗೆಗೆ ಸಹಾಯಕಾರಿಯಾಗುವ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಣಿಕಂ ಠಾಕೂರ್, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ತಳಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಿ ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲವಾಗಿ ತೊಡಗಿರುವ ಜನಾಭಿಪ್ರಾಯದ ವ್ಯಕ್ತಿಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ಟಿಕೇಟ್ ಘೊಷಿಸಲಿದೆ ಎಂದರು.
ಈ ಬಾರಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ನೀಡಲಾಗುವುದು. ಪಕ್ಷದ ಮುಖಂಡರ ಕಾರ್ಯವೈಖರಿ, ಕ್ಷೇತ್ರದ ಜನತೆಯೊಂದಿಗೆ ಇಟ್ಟುಕೊಂಡಿರುವ ಸಂಪರ್ಕ ಹಾಗೂ ಜನಾಭಿಪ್ರಾಯ ಮತ್ತು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರನ್ನು ಪರಿಗಣಿಸಿ ಟಿಕೇಟ್ ನೀಡಲಾಗುತ್ತದೆ. ಇದು ಹಾಲಿ ಶಾಸಕರಿಗೂ ಅನ್ವಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ವೀರಣ್ಣ ಮತ್ತಿಕಟ್ಟಿ, ಡಿ.ಆರ್. ಪಾಟೀಲ್, ಮಾಜಿ ಶಾಸಕ ವೀರಕುಮಾರ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಉತ್ತರ ಕನ್ನಡ ಉಸ್ತುವಾರಿ ವಿ.ಎಸ್. ಆರಾಧ್ಯ, ಎಂ.ಎಲ್. ಮೂರ್ತಿ ಇದ್ದರು.