ಕುಮಟಾ: ಭಗವದ್ ಗೀತೆಯ ಅಧ್ಯಯನದಿಂದ ಉಂಟಾಗುವ ಅನುಭೂತಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿರುತ್ತದೆ ಎಂದು ವೇದಮೂರ್ತಿ ನಾಗರಾಜ ಭಟ್ಟ ಹೇಳಿದರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಗೀತಾ ಜಯಂತಿ ಆಚರಣೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗೀತೆಯ ಪ್ರಮುಖ ಸಾರವನ್ನು ತಿಳಿಸಿ ಗೀತೆ ಬಾಳಿಗೆ ಬೆಳಕಾಗುವುದು ಎಂದರು.
ಮುಖ್ಯ ಉಪನ್ಯಾಸಗೈದ ಅವರು, ಗೀತೆಯಲ್ಲಿನ ಭಕ್ತಿಯೋಗ, ಜ್ಞಾನಯೋಗ ಮತ್ತು ಕರ್ಮ ಯೋಗದ ಕುರಿತು ಪ್ರಸ್ತುತ ವಿಚಾರವನ್ನೇ ಮುಂದಿಟ್ಟುಕೊಂಡು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು, ಮನೋ ದೌರ್ಬಲ್ಯ ನಿಗ್ರಹಕ್ಕೆ ಮತ್ತು ಅಭ್ಯಾಸ ಕ್ರಮದ ಪಾಲನೆ ಹಾಗೂ ಏಕಾಗ್ರತೆಗೆ ಗೀತೆ ಸಹಕಾರಿಯಾಗಬಲ್ಲದೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ದಿ.ವಿನಯಾ ಶಾನಭಾಗ ಪ್ರಾಯೋಜಕತ್ವದ ಗೀತಾ ಪಠಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ವಿ.ಎನ್.ಭಟ್ಟ ಪ್ರಾಯೋಜಿತ ಬಹುಮಾನವನ್ನೂ ವಿತರಿಸಲಾಯಿತು. ಭಗವ್ದಗೀತೆ ಬಾಳಿಗೆ ಬೆಳಕು ಎಂಬ ವಿಷಯದಡಿ ಏರ್ಪಸಿದ ಭಾಷಣ ಸ್ಪರ್ಧೆಯ ವಿಜೇತರಾದ ಕುಮಾರಿ ರಕ್ಷಿತಾ ಪಟಗಾರ, ಕುಮಾರ ಲಕ್ಷ್ಮೀಧರ ಗೌಡ ಹಾಗೂ ಕುಮಾರ ಸುಬ್ರಹ್ಮಣ್ಯ ಗುನಗಾ ಇವರುಗಳಿಗೆ ಸಂಸ್ಕೃತ ಉಪನ್ಯಾಸ ವೇದಿಕೆಯ ಅಧ್ಯಕ್ಷರಾದ ವಿ.ಆರ್.ಜೋಶಿ ಬಹುಮಾನ ಘೋಷಿಸಿದರು.
ಶಿಕ್ಷಕ ಅನಿಲ್ ರೊಡ್ರಿಗೀಸ್ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿದರು. ಶಿಕ್ಷಕ ಪ್ರದೀಪ ನಾಯ್ಕ ವಂದಿಸಿದರು.