ಹೊನ್ನಾವರ : ಸಾಮಾಜಿಕ ಪರಿಶೋಧನೆಯಿಂದ ಇಂದು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ಪಂಚಾಯತ ಕಡೆಗೆ ಮುಖಮಾಡುವಂತಾಗಿದೆ ಸಾಮಾಜಿಕ ಪರಿಶೋಧನೆಯಿಂದ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯ ಎಂದು ತಾಲೂಕಾ ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಅವರು ಮಂಗಳವಾರ ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯತನಲ್ಲಿ ನಡೆದ 2017-18ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಇರುವ ಒಂದು ಮಹತ್ವಪೂರ್ಣ ಯೋಜನೆಯಾಗಿದ್ದು, ಸಮಾಜದಲ್ಲಿ ನಿರ್ಗತಿಕರು ಅಸಹಾಯಕರಿಗೆ ಯೋಜನೆ ಆಶಾದೀಪವಾಗಿದೆ. ಅವಕಾಶಗಳು ಒಮ್ಮೊಮ್ಮೆ ಮಾತ್ರ ಒದಗಿ ಬರುವಂತದ್ದು ಆಗ ನಾವು ಅವಕಾಶ ಪಡೆಯುವಲ್ಲಿ ಮೀನ ಮೇಷ ಎಣಿಸಿದಲ್ಲಿ ಅದರಿಂದ ವಂಚಿತರಾಗುತ್ತೇವೆ. ಯೋಜನೆ ನಿಂತ ನೀರಲ್ಲ ಸದಾ ಹರಿಯುವ ನದಿಯಂತೆ. ಯೋಜನೆ ನಿಯಮದಂತೆ ಕಾಮಗಾರಿ ನಿರ್ವಹಿಸಿದ್ದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು. ಈ ಬಗ್ಗೆ ಗ್ರಾಮದ ಸಾಮಾನ್ಯ ಜನರಿಗೆ ಅರಿವೂ ಮೂಡಿಸುವ ಅವಶ್ಯಕತೆ ಇದೆ ಎಂದರು.
ಗ್ರಾಮಮಟ್ಟದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಯಾವುದೇ ಕಾಮಗಾರಿ ನಿರ್ವಹಿಸುವ ಮೊದಲು ಅವಶ್ಯ ದಾಖಲುಗಳನ್ನು ಸಂಗ್ರಹಿಸಿಕೊಂಡು ಮತ್ತು ಯೊಜನೆಯ ನಿಯಮ ಮೀರದಂತೆ ಕಾಮಗಾರಿ ನಿರ್ವಹಿಸಬೇಕಾಗಿ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಜಿ.ಎಲ್. ನಾಯ್ಕ ಹೇಳಿದರು. . ಸಾಮಾಜಿಕ ಪರಿಶೋಧನಾ ವರದಿಯನ್ನು ಗ್ರಾಮಸಂಪನ್ಮೂಲ ವ್ಯಕ್ತಿ ರಾಜು ನಾಯ್ಕ ಸಭೆಯಲ್ಲಿ ಮಂಡಿಸಿ ಸಭೆಯ ತಿರ್ಮಾನಕ್ಕೆ ಬಿಟ್ಟರು.
ಈ ಅವದಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಅಭಿವೃದ್ಧಿ ಅಧಿಕಾರಿ ನಾರಾಯಣ ನಾಯ್ಕ ಓದಿ ಹೇಳಿದರು. ಪಂಚಾಯತ ಅಧ್ಯಕ್ಷ ಚಂದ್ರಹಾಸ ನಾಯ್ಕ, ಉಪಾಧ್ಯಕ್ಷೆ ಸುನೀತಾ ಶೇಟ್ ಸದಸ್ಯರು ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಾಧಾ ನಾಯ್ಕ ಮತ್ತು ಫಲಾನುಭವಿಗಳು ಹಾಜರಿದ್ದರು.
ಪೋಟೋ ಕ್ಯಾಪ್ಸನ್- ಪರಿಶೋಧನೆ ಗ್ರಾಮಸಭೆಯಲ್ಲಿ ತಾಲೂಕು ಸಾಮಾಜಿಕ ಪರಿಶೋದನಾ ಸಂಯೋಜಕ ಉಮೇಶ ಮುಂಡಳ್ಳಿ ಮಾತನಾಡುತ್ತಿರುವುದು.