ಅಮ್ರೇಲಿ: ಹಿಂದೂಯೇತರ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ತಿರುಗೇಟು ನೀಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಾವು ಧರ್ಮದ ದಲ್ಲಾಳಿಗಳಲ್ಲ, ನಾವು ಶಿವನ ಭಕ್ತರು ಎಂದು ಹೇಳಿದ್ದಾರೆ.
ಈ ಹಿಂದೆ ಸೋಮನಾಥ ದೇವಾಲಯ ಪ್ರವೇಶ ಸಂದರ್ಭದಲ್ಲಿ ಹಿಂದೂಯೇತರ ಎಂದು ನಮೂದಿಸಿರುವ ಬಗ್ಗೆ ಸೃಷ್ಟಿಯಾಗಿದ್ದ ವಿವಾದ ಸಂಬಂಧ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ನಾವು ಧರ್ಮದ ದಲ್ಲಾಳಿಗಳಲ್ಲ. ನಮ್ಮ ಧರ್ಮದ ಪ್ರಮಾಣಪತ್ರವನ್ನು ಯಾರಿಗೂ ಪ್ರದರ್ಶಿಸಬೇಕಾದ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಭಾವನಗರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, “ನನ್ನ ಅಜ್ಜಿ ಹಾಗೂ ಕುಟುಂಬದ ಎಲ್ಲರೂ ಶಿವಭಕ್ತರು. ಆದರೆ ಅದನ್ನು ನಾವು ಎಲ್ಲೂ ಹೇಳಿಕೊಳ್ಳುವುದಿಲ್ಲ. ಏಕೆಂದರೆ ಧರ್ಮ ಎನ್ನುವುದು ವೈಯಕ್ತಿಕ ವಿಚಾರ. ನಮ್ಮ ನಂಬಿಕೆ ವೈಯಕ್ತಿಕ ವಿಚಾರ. ಈ ಬಗ್ಗೆ ಯಾರಿಗೂ ಪ್ರಮಾಣಪತ್ರ ನೀಡಬೇಕಾದ್ದಿಲ್ಲ. ನಾವು ಧರ್ಮದ ದಲ್ಲಾಳಿಗಳಲ್ಲ. ಅದನ್ನು ರಾಜಕೀಯವಾಗಿ ನಾವು ಬಳಸುವುದಿಲ್ಲ” ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಹುಲ್, ಕಾಂಗ್ರೆಸ್ ಪಕ್ಷ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಅಧಿಕಾರಕ್ಕೆ ಬಂದ 10 ದಿನಗಳ ಒಳಗಾಗಿ ರೈತರ ಸಾಲ ಮನ್ನಾ ಮಾಡುವುದಾಗಿಯೂ ಮತ್ತು ಕಾಲೇಜು ಶುಲ್ಕವನ್ನು ಶೇ. 80ರಷ್ಟು ಕಡಿತಗೊಳಿಸುವುದಾಗಿಯೂ ಭರವಸೆ ನೀಡಿದರು.