ಚೆನ್ನೈ: ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ವಿಧ್ವಂಸ ಸೃಷ್ಟಿ ಮಾಡಿರುವ ಒಖಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಲಕ್ಷದ್ವೀಪದತ್ತ ಸಾಗುತ್ತಿರುವ ಒಖಿ ಚಂಡಮಾರುತವು ತಮಿಳುನಾಡು, ಕೇರಳ ಕರಾವಳಿಯನ್ನು ಅಕ್ಷರಶಃ ನಡುಗಿಸಿದ್ದು, ಚಂಡಮಾರುತದ ಪ್ರಭಾವದಿಂದಾಗಿ ಈ ಎರಡೂ ರಾಜ್ಯಗಳಲ್ಲಿ ನಿರಂತರ ಭಾರಿ ಮಳೆಯಾಗುತ್ತಿದೆ. ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಈ ವರೆಗೂ ಎರಡೂ ರಾಜ್ಯಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಕೇಂದ್ರ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಇನ್ನಷ್ಟು ತೀವ್ರತೆ ಪಡೆಯಲಿದ್ದು, ಲಕ್ಷದ್ವೀಪದತ್ತ ಹೋಗಿ, ನಂತರ ಅಲ್ಲಿಂದ ಉತ್ತರದ ಕಡೆಗೆ ಸಂಚರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪದಲ್ಲಿ ಭಾರೀ ಬಿರುಗಾಳಿ, ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಉರುಳಿರುವ ಕಾರಣ, ಕಗ್ಗತ್ತಲು ಆವರಿಸಿದೆ. ಗಾಳಿಯ ತೀವ್ರತೆಗೆ ನೂರಾರು ಮರಗಳು ನೆಲಕ್ಕುರುಳಿದ್ದು, ಮನೆ ಕಟ್ಟಡಗಳು ಹಾನಿಗೀಡಾಗಿವೆ. ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೇರಳದಲ್ಲಿ ಶುಕ್ರವಾರ ಚಂಡಮಾರುತ ಸಂಬಂಧಿ ಘಟನೆಯಿಂದಾಗಿ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 7ಕ್ಕೇರಿದೆ. ಹೀಗಾಗಿ, ಒಟ್ಟಾರೆ ಕೇರಳ ಮತ್ತು ತಮಿಳುನಾಡಿನಲ್ಲಿ ಎರಡು ದಿನಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.
ಒಖೀ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಸಿಲುಕಿದ್ದ 218 ಮಂದಿ ಕೇರಳದ ಮೀನುಗಾರರನ್ನು ಶುಕ್ರವಾರ ರಕ್ಷಿಸಲಾಗಿದ್ದು, ಶನಿವಾರ ಸಂಜೆಯವರೆಗೂ ಸಮುದ್ರದ ಅಲೆಗಳ ಅಬ್ಬರ ಜೋರಾಗಿರಲಿದ್ದು, ಕರಾವಳಿ ತೀರದ ಜನ ಆದಷ್ಟು ಎಚ್ಚರಿಕೆಯಿಂದಿರುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ.
ಕೇರಳ ರಾಜ್ಯವೊಂದರಲ್ಲೇ ಶುಕ್ರವಾರ 3 ಸಾವು ಸಂಭವಿಸಿದ್ದು, ಈ ರಾಜ್ಯದಲ್ಲಿ ಮೃತರ ಸಂಖ್ಯೆ 7ಕ್ಕೇರಿಕೆಯಾಗಿದೆ. ಇನ್ನು ಕೇರಳದಲ್ಲಿ ರಾಜ್ಯ ಸರ್ಕಾರ ಮಳೆ ಬಾಧಿತ ಪ್ರದೇಶಗಳಲ್ಲಿ 29 ಪರಿಹಾರ ಶಿಬಿರಗಳ ಸ್ಥಾಪನೆ ಮಾಡಿದ್ದು, ಇಲ್ಲಿ ಒಟ್ಟು 491 ಕುಟುಂಬಗಳ 2755 ಮಂದಿಯನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನು ಮಳೆ ಮತ್ತು ಚಂಡಮಾರುತದ ಆರ್ಭಟಕ್ಕೆ ಕೇರಳದಲ್ಲಿ 56 ಮನೆಗಳು ಸಂಪೂರ್ಣ ಧ್ವಂಸಗೊಂಡಿದೆ. ಉಳಿದಂತೆ 799 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ತಮಿಳುನಾಡಿನಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ ಚಂಡ ಮಾರುತದ ಅಬ್ಬರಕ್ಕೆ ಸಾಕಷ್ಟು ಆಸ್ತಿ-ಪಾಸ್ತಿ ಹಾಗೂ ಜೀವಹಾನಿಯಾಗಿದ್ದು, 2 ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ಐವರು ನಾಪತ್ತೆಯಾಗಿದ್ದಾರೆ. ತಮಿಳುನಾಡಿನ 5 ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಸಮುದ್ರದಲ್ಲಿ 6 ಅಡಿಗೂ ಎತ್ತರದ ಅಲೆಗಳು ಎದ್ದು ತೀರ ಪ್ರದೇಶದ ಅಲೆಗಳ ರಭಸಕ್ಕೆ ಪ್ರಕ್ಷುಬ್ದವಾಗಿವೆ, ಇನ್ನು ತಮಿಳುನಾಡಿನ ತಮಿರಭರಣಿ ನದಿ ಸತತ ಭಾರಿ ಮಳೆ ಪರಿಣಾಮ ಅಪಾಯದ ಮಟ್ಟ ಮೀರಿ ಹರಿಯುಚ್ಚಿದೆಯ ಮುಂದಿನ 24 ಗಂಟೆಗಳಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಂಭಾವ್ಯ ಪ್ರವಾಹದಿಂದ ತಪ್ಪಿಸಿಕೊಳ್ಳಲು ನದಿ ಪಾತ್ರ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ 62 ಮನೆಗಳು ಸಂಪೂರ್ಣ ಧ್ವಂಸಗೊಂಡಿದ್ದು, 240 ಮನೆಗಳಿಗೆ ಭಾಗಶಃ ಹಾನಿ,ಯಾಗಿದೆ ಅಂತೆಯೇ ಬರೊಬ್ಬರಿ 579 ಮರಗಳು ಧರೆಗುರುಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.