ಶಿರಸಿ: ಹುಲೇಕಲ್ ವಲಯ ಹಾಗೂ ಶಿರಸಿ ವಲಯ ಅರಣ್ಯ ಸಿಬ್ಬಂದಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಇದನ್ನು ತಕ್ಷಣವೇ ಸರಿಪಡಿಸಬೇಕು ಎಂದು ಆಗ್ರಹಿಸಿ ಜಿಪಂ ಸದಸ್ಯ ಜಿ.ಎನ್.ಹೆಗಡೆ, ಅವರು ಶಿರಸಿ ಡಿಎಫ್‍ಓ ಸುದರ್ಶನ ಅವರಿಗೆ ಮನವಿ ಮಾಡಿದ್ದಾರೆ.
ತಾಲೂಕಿನ ಹುಲೇಕಲ್ ಹಾಗೂ ಶಿರಸಿ ವಲಯದ ಕೆಲವು ಗ್ರಾಮ ಪಂಚಾಯತಿಗಳು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲಿ ಅರಣ್ಯ ಸಿಬ್ಬಂದಿಗಳು ರೈತರ ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ ಹಾಗೂ ಅಭಿವೃದ್ಧಿ ಕೆಲಸಗಳಿಗೂ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಡಿನ ಸಮೀಪ ಇರುವ ಸಾರ್ವಜನಿಕ ರಸ್ತೆಗೆ ಮಣ್ಣು ಹಾಕಲು ಬಿಡದೇ ಸಮಸ್ಯೆ ತರುತ್ತಿದ್ದಾರೆ. ಮಾವಿನ ಮರಗಳ ಟೊಂಗೆ ತೆಗೆದು ಊರ ಹಬ್ಬ, ದೇಗುಲಗಳ ಕಾರ್ತಿಕೋತ್ಸವಕ್ಕೆ ತೋರಣ ಮಾಡಿದರೂ ದಂಡ ಹಾಕುತ್ತೇವೆ ಎನ್ನುತ್ತಾರೆ. ರೈತರು ಅನಾದಿಕಾಲದಿಂದಲೂ ವೈವಾಟಿ ಜಾಗದಲ್ಲಿ ಮರಗಳಿಗೆ ಧಕ್ಕೆಯಾಗದಂತೆ ಭತ್ತದ ಕಣ ನಿರ್ಮಿಸಿ, ಮಣ್ಣು ಸಮತಟ್ಟು ಮಾಡಿರುವದಕ್ಕೂ ಅರಣ್ಯ ಸಿಬ್ಬಂದಿಗಳು ದಂಡ ಹಾಕುತ್ತಿದ್ದಾರೆ. ಮನೆ ಮೇಲೆ ಅಪಾಯಕಾರಿಯಾಗಿರುವ ಮರಗಳ ತೆಗೆಸಲು ದಂಡ ತುಂಬುವಂತೆ ರೈತರಿಗೆ ಸೂಚನೆ ನೀಡಲಾಗುತ್ತಿದೆ. ರೈತರಿಗೆ, ಕೂಲಿಕಾರರಿಗೆ ತೊಂದರೆ ಕೊಡಲಾಗುತ್ತಿದೆ. ಇದು ತಕ್ಷಣ ನಿಲ್ಲಬೇಕು ಎಂದು ಒತ್ತಾಯಿಸಿ ಮನವಿ ನೀಡಿದರು.