ನವದೆಹಲಿ: ಭಾರತೀಯ ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 6 ಹೊಸ ಅಣುಚಾಲಿತ ಜಲಾಂತರ್ಗಾಮಿ ನಿರ್ಮಾಣ ಯೋಜನೆಗೆ ಚಾಲನೆ ನೀಡಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಕೇಂದ್ರ ರಕ್ಷಣಾ ಇಲಾಖೆ ಮತ್ತು ಭಾರತೀಯ ನೌಕಾಪಡೆ ಆರು ಹೊಸ ಅಣುಚಾಲಿತ ಜಲಾಂರ್ಗಾಮಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಜಲಾಂತರ್ಗಾಮಿ ನಿರ್ಮಾಣ ಕಾರ್ಯ ರಹಸ್ಯ ಯೋಜನೆಯಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಆಡ್ಮಿರಲ್ ಸುನಿಲ್ ಲಾಂಬಾ ತಿಳಿಸಿದ್ದಾರೆ. ಅಂತೆಯೇ ಭಾರತೀಯ ಸೇನೆ ಹಿಂದೂ ಮಹಾಸಾಗರ ಮತ್ತು ಫೆಸಿಫಿಕ್ ಮಹಾಸಾಗರ ಪ್ರದೇಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಭಾರತೀಯ ನೌಕಾಪಡೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ನೌಕಾಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದು ನೌಕಾಪಡೆ ಮುಖ್ಯಸ್ಥ ತಿಳಿಸಿದರು.
ಸುದ್ದಿಗೋಷ್ಠಿ ವೇಳೆ ಭಾರತೀಯ ಸೇನೆಯ ಅಗತ್ಯತೆಗಳ ಕುರಿತು ಮಾತನಾಡಿದ ಸುನಿಲ್ ಲಾಂಬಾ ಅವರು, ಸಬ್ ಮೆರಿನ್ ಗಳ ನಿರ್ಮಾಣ ಮಾತ್ರವಲ್ಲದೇ ಹೊಸ ಯುದ್ಧ ನೌಕೆಗಳು, ಹೊಸ ಬಗೆಯ ಶಸ್ತ್ರಾಸ್ಚ್ರ ವ್ಯವಸ್ಥೆಗಳ ಸೇರ್ಪಡೆ ಮತ್ತು ಸಾಂಪ್ರದಾಯಿಕ ಯುದ್ಧ ಮತ್ತು ಅಸಂಪ್ರದಾಯಿಕ ಬೆದರಿಕೆಗಳನ್ನು ಎದುರಿಸುವ ಕುರಿತ ಸೇನೆಯನ್ನು ಬಲಪಡಿಸುವ ಅಗತ್ಯತೆ ಇದೆ ಎಂದು ಹೇಳಿದರು. ಸಬ್ ಮೆರಿನ್ ಗಳ ನಿರ್ಮಾಣ ಯೋಜನೆಯನ್ನು ಕ್ಲಾಸಿಫೈಯ್ಡ್ ಯೋಜನೆ ಎಂದು ಬಣ್ಣಿಸಿದ ಸುನಿಲ್ ಲಾಂಬಾ, ಚೀನಾ ದೇಶದ ಕಡಲ್ಗಳ್ಳರ ನಿಯಂತ್ರಣಕ್ಕಾಗಿ ಸಬ್ ಮೆರಿನ್ ಗಳನ್ನು ನಿಯೋಜಿಸುತ್ತಿರುವುದಾಗಿ ಹೇಳಿದೆಯಾದರೂ, ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ. ದೇಶದ ಸಮುದ್ರಗಡಿ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.