ಶಿರಸಿ: ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ 15ನೇ ರಾಜ್ಯ ಸಮ್ಮೇಳನವನ್ನು ಜ. 6 ಮತ್ತು 7ರಂದು ಇಲ್ಲಿನ ವಿಕಾಸ ಆಶ್ರಮ ಮೈದಾನದಲ್ಲಿ ಆಯೋಜಿಸಲಾಗಿದೆ. ಸುಮಾರು 300ಕ್ಕೂ ಅಧಿಕ ಸಂಗೀತ ಕಲಾವಿದರು ಭಾಗವಹಿಸುವರು ಎಂದು ಸುಗಮ ಸಂಗೀತ ಪರಿಷತ್ ರಾಜ್ಯಾಧ್ಯಕ್ಷ ಕಿಕ್ಕಿರಿ ಕೃಷ್ಣಮೂರ್ತಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಸಮ್ಮೇಳನ ಜರುಗಲಿದೆ. ಜಿಲ್ಲಾ ಮಟ್ಟದಲ್ಲಿ ಮಾತ್ರ ರಾಜ್ಯ ಸಮ್ಮೇಳನ ಸಂಘಟನೆ ನಡೆಯುತ್ತಿದ್ದುವು. ಆದರೆ, ಇದೇ ಮೊದಲ ಬಾರಿಗೆ ತಾಲೂಕು ಮಟ್ಟದಲ್ಲಿ ರಾಜ್ಯ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಎರಡು ದಿನಗಳ ಕಾಲ ಬೆಳಿಗ್ಗೆ 9 ರಿಂದ 11ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಹಲವು ಘೋಷ್ಠಿಗಳು ನಡೆಯಲಿವೆ ಎಂದರು.
ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು, ಸಂಗೀತ ನಿರ್ದೇಶಕರು, ವಾದ್ಯ ಕಲಾವಿದರು ಸೇರಿದಂತೆ ವಿವಿಧ ಪ್ರಮುಖರ ಅಪೂರ್ವ ಸಂಗಮವನ್ನು ಸಮ್ಮೇಳನದಲ್ಲಿ ಕಾಣಬಹುದಾಗಿದೆ. ಕಲಾವಿದರಾದ ಬಿ.ವಿ. ಸುಮಿತ್ರ, ಕಸ್ತೂರಿ ಶಂರ್, ಶಂಕರ್ ನಾಯ್ಕ, ಅರ್ಚನಾ ಉಡುಪ, ರಮೇಶ ಚಂದ್ರ ಸೇರಿದಂತೆ ಹಲವರು ಆಗಮಿಸುವರು. ಇದಕ್ಕಾಗಿ ಸ್ಥಳೀಯ ಸಚಿವ, ಶಾಸಕ, ಸಂಸ್ಥೆಗಳೂ ಸೇರಿದಂತೆ ಹಲವರು ಸಹಕಾರ ನೀಡುವರು. ಡಿ. 11 ರಿಂದ 15 ರ ವರೆಗೆ ಉಚಿತ ಶಿಬಿರ ನಡೆಯಲಿದೆ ಎಂದರು.
ಬಿ.ಕೆ. ಸುಮಿತ್ರಾ, ಶಾಂತಾ ಶೆಟ್ಟಿ, ಪ್ರಕಾಶ ಹೆಗಡೆ, ರತ್ನಾಕರ ಸುದ್ದಿಗೋಷ್ಠಿಯಲ್ಲಿದ್ದರು.