ಯಲ್ಲಾಪುರ : ಮಾನವ ಅಲಭ್ಯವಾದುದನ್ನು ಪಡೆಯುವುದು ಯೋಗವಾಗಿದ್ದರೆ, ಅದನ್ನು ಉಳಿಸಿಕೊಳ್ಳುವುದನ್ನು ಕ್ಷೇಮ ಎಂದು ಕರೆಯುತ್ತಾರೆ. ಇಂತಹ ಯೋಗ, ಕರ್ಮ, ಜ್ಞಾನಗಳನ್ನು ಭಗವಂತ ಕರುಣಿಸಿದ್ದಾನೆ. ಭಾರತ ದೇಶ ಜ್ಞಾನಿಗಳ ನಾಡು. ಅದಕ್ಕಾಗಿ ವಿಶ್ವವೇ ಭಾರತವನ್ನು ಗೌರವಿಸುತ್ತಿದೆ ಎಂದು ನಿವೃತ್ತ ಉಪನ್ಯಾಸಕ ಯಕ್ಷಗಾನ ಅರ್ಥಧಾರಿ ಎಂ.ಎನ್.ಹೆಗಡೆ ಹಳವಳ್ಳಿ ಹೇಳಿದರು.
ಪಟ್ಟಣದ ನಾಯಕನ ಕೆರೆಯ ಶಾರದಾಂಬಾ ಸಂಸ್ಕೃತ ಪಾಠಾಶಾಲಾ ಸಭಾಭವನದಲ್ಲಿ ಗೀತಾ ಜಯಂತಿ ಮತ್ತು ಗೀತಾ ಸಪ್ತಾಹದ 10ನೇ ವರ್ಷದ ಸಮಾರೋಪದಲ್ಲಿ ಮಾತನಾಡಿದ ಅವರು, ಸ್ವರ್ಣವಲ್ಲಿ ಶ್ರೀ ಕಳೆದ 10 ವರ್ಷದಿಂದ ಗೀತಾ ಅಭಿಯಾನವನ್ನು ನಡೆಸಿ ಪ್ರತಿ ಮನೆಯಲ್ಲಿ ಗೀತಾಯಜ್ಞ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಗೀತಾ ಜಯಂತಿ ಪ್ರಾರಂಭಗೊಂಡಿದೆ. ಶ್ರೀಗಳ ನಿರ್ದೇಶನ ಮತ್ತು ಪ್ರೇರಣೆಯಿಂದ ನಾವೆಲ್ಲರು ಪ್ರತಿನಿತ್ಯ ಭಗವದ್ಗೀತೆಯ 1 ಅಧ್ಯಾಯವನ್ನಾದರೂ ಓದಲೇಬೇಕು.
ಪ್ರತಿದಿನ 1 ಗಂಟೆ ಗೀತಾ ಪಠಣ ಮಾಡಿದರೆ 6 ದಿನಗಳಲ್ಲಿ 700 ಶ್ಲೋಕಗಳನ್ನು ಓದಬಹುದು. ದಿನಕ್ಕೆ 130-131 ಶ್ಲೋಕಗಳನ್ನು ಓದಬೇಕಾಗುತ್ತದೆ. ಗೀತೆಯ ಕರ್ಮಯೋಗದಲ್ಲಿ ನಾವು ಹೇಗೆ ನಡೆಯಬೇಕೆಂಬ ಕುರಿತು ಭಗವಂತ ಸ್ಪಷ್ಟ ನಿರ್ದೇಶನ ನೀಡಿದ್ದಾನೆ. ಗೀತೆಯ ಎಲ್ಲ ಅಧ್ಯಾಯಗಳಲ್ಲಿ ಸಂಸ್ಕೃತ ಬೋಧಿಸಲ್ಪಟ್ಟಿದೆ. ಭಗವಂತನ ಕುರಿತು ಅಷ್ಟೇ ನಂಬಿಕೆ, ವಿಶ್ವಾಸ, ಶ್ರದ್ಧೆಯಿಂದ ತಲ್ಲೀನತೆಯಿಂದ ಗೀತಾ ಚಿಂತನೆಯಡೆ ಸಾಗಿದರೆ ಪಾಪಗಳು ದೂರವಾಗಿ, ನಾವು ಯೋಗಿಗಳಾಗಿ ಭಗವಂತನ ಸಾನಿಧ್ಯ ಪಡೆಯ ಬಹುದಾಗಿದೆ. ಅದುವೇ ಮೋಕ್ಷಕ್ಕೆ ಕಾರಣವಾಗುತ್ತದೆ. ನಾವು ಕಾಮ್ಯ-ಕರ್ಮಗಳನ್ನು ಪಡೆಯಲೆಂದು, ಸತ್ಕಾರ್ಯಗಳನ್ನು ನಡೆಸುತ್ತೇವೆ. ಇದರಿಂದ ಭಗವಂತನ ಸಂಪೂರ್ಣ ಅರ್ಪಣಾ ಭಾವ ದೊರೆಯಲು ಸಾಧ್ಯವಿಲ್ಲ. ನಾವು ನಮ್ಮ ಕರ್ಮವನ್ನು ತೊರೆದು, ಆಸೆಯನ್ನು ಬೆನ್ನತ್ತಿದರೆ ಪುನಃ ದುಃಖವನ್ನು ಕಾಣಬೇಕಾಗುತ್ತದೆ ಎಂದರು.
ಭಗವದ್ಗೀತಾ ಜಿಲ್ಲಾ ಸಮಿತಿ ಸದಸ್ಯ ಡಿ.ಎನ್.ಗಾಂವ್ಕರ್ ಮಾತನಾಡಿ, ಕಳೆದ 10 ವರ್ಷಗಳಿಂದ ಪೂಜ್ಯ ಗುರುಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಗೀತಾಭಿಯಾನ ನಡೆಸಲಾಗುತ್ತಿದೆ. ಇಂದಿಗೂ ಗೀತಾ ಪಠಣವನ್ನು ಪ್ರತಿ ಮನೆಗಳಲ್ಲಿಯೂ ದಿನದ ಪರಿಪಾಠ ವನ್ನಾಗಿ ಬೆಳೆಸಿಕೊಂಡಿದ್ದಾರೆ. ಯಲ್ಲಾಪುರ ತಾಲೂಕಿನಲ್ಲಿ ಈ ವರ್ಷ ಅಭಿಯಾನ ಅತ್ಯುತ್ತಮ ಸ್ವರೂಪದಲ್ಲಿ ನಡೆದು ಯಶಸ್ವಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಸಮಿತಿ ಅಧ್ಯಕ್ಷ ಎಸ್.ಎನ್.ಭಟ್ಟ ಏಕಾನ್ ಮಾತನಾಡಿ, ಶ್ರೀಗಳ ಅಪೇಕ್ಷೆಯಂತೆ ಈ ವರ್ಷವೂ ತಾಲೂಕಿನ ಅಭಿಯಾನವನ್ನು ನಿರ್ವಹಿಸುವ ಸದಾವಕಾಶ ಲಭ್ಯವಾಗಿದೆ. ಸ್ವರ್ಣವಲ್ಲಿ ಶ್ರೀ ನಿರ್ದೇಶನದಂತೆ ಬಹುತೇಕ ಮನೆಗಳಲ್ಲಿ ಲಲಿತಾ ಸಹಸ್ರನಾಮ, ಭಗವದ್ಗೀತೆಯನ್ನು ಮಾತೆಯರು ಪಠಿಸುತ್ತಿದ್ದಾರಲ್ಲದೆ, ಶಾಲೆಗಳಲ್ಲಿಯೂ ಗೀತಾ ಪಠಣ ನಡೆಯುತ್ತಿದೆ. ಅಲ್ಲದೆ ಯಡತೊರೆ ಶ್ರೀಗಳ ನೇತೃತ್ವದಲ್ಲಿ ನಡೆದ ಸೌಂದರ್ಯ ಲಹರಿ ಸ್ತೋತ್ರದ ಪ್ರೇರಣೆ ಪಡೆದ ನಮ್ಮ ಮಾತೆಯರು ಇಂದಿಗೂ ಅವುಗಳ ಪಠಣವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ತಾಲೂಕಿನಲ್ಲಿ ಈ ವರ್ಷ 100 ಕ್ಕೂ ಹೆಚ್ಚು ಅಭಿಯಾನದ ಕೇಂದ್ರಗಳ ಮೂಲಕ ಉದ್ದೇಶಿತ ಕಾರ್ಯದಲ್ಲಿ ಯಶಸ್ಸು ಪಡೆಯಲಾಗಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕಂಠಪಾಠ ಸ್ಪರ್ಧೆಯಲ್ಲಿ ಗೀತೆಯ 6 ನೇ ಅಧ್ಯಾಯ ಪಠಣದ ಸ್ಫರ್ಧೆಯಲ್ಲಿ ತಾಲೂಕಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ ಸಂಗತಿ. ಅಂತೆಯೇ ಪ್ರೌಢಶಾಲಾ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಈ ಎಲ್ಲ ಕಾರ್ಯಕ್ರಮದಲ್ಲಿ ಸಹಕರಿಸಿದವರನ್ನು ಅಭಿನಂದಿಸಲೇಬೇಕು ಎಂದರು.
ಯಲ್ಲಾಪುರ ಸೀಮಾ ಪರಿಷತ್ ಅಧ್ಯಕ್ಷ ಎನ್.ಎಂ.ಹೆಗಡೆ ಪಣತಗೇರಿ ಉಪಸ್ಥಿತರಿದ್ದರು. ಅಭಿಯಾನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಎನ್.ಎಸ್ ಭಟ್ಟ, ಕಣ್ಣಿಗೇರಿ ಗ್ರಾ.ಪಂ ಸದಸ್ಯರು ಸನ್ಮಾನಿಸಿದರು.
ಗೀತಾ ಜಯಂತಿ ಮತ್ತು ಭಗವದ್ಗೀತಾ ಅಭಿಯಾನದ ಅಂಗವಾಗಿ ನಡೆದ ಪ್ರೌಢಶಾಲಾ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ ರವಿ ಭಟ್ಟ ಹಾಗೂ ವೆಂಕಟೇಶ್ ಗೇರಗದ್ದೆ ಪ್ರಥಮ ಸ್ಥಾನವನ್ನು ಮಂಚಿಕೇರಿಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತೀಕ್ಷಾ ಹೆಗಡೆ ಹಾಗೂ ಎಚ್.ಎಸ್.ಸೀಮಾ ದ್ವಿತೀಯ ಸ್ಥಾನವನ್ನು ಹಾಗೂ ಬಿಸಗೋಡಿನ ಸರಕಾರಿ ಪ್ರೌಢಶಾಲೆಯ ಗಿರೀಶ ಭಟ್ಟ ಹಾಗೂ ನಿರಂಜನ ಭಟ್ಟ ತೃತೀಯ ಸ್ಥಾನವನ್ನು ಪಡೆದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಂಪ್ಲಿ ಗ್ರಾಪಂ ವ್ಯಾಪ್ತಿಯ ಶಿರನಾಲಾ ಶಾಲೆಯ ನಿಖಿಲಾ ಹೆಗಡೆ ಪ್ರಥಮ, ಪಟ್ಟಣದ ಬಾಳಗಿಮನೆ ಶಾಲೆಯ ದಿವಾಕರ ಗೇರಗದ್ದೆ ದ್ವಿತೀಯ ಹಾಗೂ ಹಾಸಣಗಿ ಗ್ರಾ.ಪಂ ವ್ಯಾಪ್ತಿಯ ಕೊಸಗುಳಿ ಶಾಲೆಯ ಶ್ರೀಕೃಷ್ಣ ಜೋಶಿ ತೃತೀಯ ಸ್ಥಾನ ಪಡೆದರು